ಶನಿವಾರಸಂತೆ, ಜೂ. ೯: ಪಟ್ಟಣದ ಸ್ನೇಹ ಸಮ್ಮಿಲನ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಶತಮಾನ ಪೂರೈಸಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಹಿನ್ನೆಲೆ ನಿವೃತ್ತ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಪಿಯು ಉಪನ್ಯಾಸಕರಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

೧೯೮೩-೧೯೯೩ ರವರೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ “ಸ್ನೇಹ ಸಮ್ಮಿಲನ” ಕಾರ್ಯಕ್ರಮದಲ್ಲಿ ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಶತಮಾನೋತ್ಸವ, ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದು ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲಾಭಿವೃದ್ಧಿ ಸಮಿತಿ, ಸ್ಥಳೀಯ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಿವೃತ್ತ ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಿ ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಹಾಸನ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಶಿಕ್ಷಕಿ ಜ್ಯೋತಿ, ಬೆಳೆಗಾರ ಪ್ರದೀಪ್, ಉದ್ಯಮಿ ಪ್ರಕಾಶ್, ಕವಯತ್ರಿ ಧನು, ಕುಮಾರ್, ಪರಮೇಶ್ ಇತರ ೪೦ ಮಂದಿ ಹಾಜರಿದ್ದರು.