ಸಿದ್ದಾಪುರ, ಜೂ. ೯: ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆ ಭಾಗದ ವಸತಿ ಪ್ರದೇಶದಲ್ಲಿ ಒಂಟಿ ಸಲಗದ ಹಾವಳಿ ಮುಂದುವರೆದಿದ್ದು, ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನೆಲ್ಲಿಹುದಿಕೇರಿ ಶಾಲೆ ರಸ್ತೆಯ ಭಾಗದ ವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಒಂಟಿ ಸಲಗವು ರಾತ್ರಿ ಸಮಯದಲ್ಲಿ ಮನೆಗಳ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಲ್ಲದೆ ಮನೆಗಳ ತೆಂಗು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ತಿಂದು ನಾಶಗೊಳಿಸುತ್ತಿದೆ. ಸುಬ್ರಮಣಿ ಹಾಗೂ ಉದಯ್ ಕುಮಾರ್ ಎಂಬವರ ಮನೆಯ ಬಳಿ ಬಂದು ಸಲಗವು ದಾಂಧಲೆ ನಡೆಸಿದೆ. ಕಾಫಿ ಗಿಡಗಳನ್ನು ಹಾಗೂ ತೆಂಗಿನ ಮರಗಳನ್ನು ಧ್ವಂಸಗೊಳಿಸಿರುತ್ತದೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ನಿವಾಸಿ ಉದಯ್ ಕುಮಾರ್ ತಿಳಿಸಿದ್ದಾರೆ.

ರಾತ್ರಿ ಸಮಯದಲ್ಲಿ ದಿನನಿತ್ಯ ಒಂಟಿ ಸಲಗ ಮನೆಗಳು ಸುತ್ತ ಓಡಾಡುತ್ತಿರುವುದರಿಂದ ರಾತ್ರಿ ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಲಗವನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ಇದೇ ಸಲಗವು ರಾತ್ರಿ ಸಮಯದಲ್ಲಿ ಸ್ಥಳೀಯ ಖಾಸಗಿ ಶಾಲೆಯೊಂದರ ಮೈದಾನಕ್ಕೆ ಲಗ್ಗೆ ಇಟ್ಟಿದ್ದು ಸಲಗ ಓಡಾಡುತ್ತಿರುವ ದೃಶ್ಯ ಶಾಲೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಒಂಟಿ ಸಲಗದ ಉಪಟಳದಿಂದ ಈ ಭಾಗದ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. - ವರದಿ: ವಾಸು