ಕಾಶ್ಮೀರ: ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರಿಂದ ಗುಂಡಿನ ದಾಳಿ, ೯ ಮಂದಿ ಸಾವು
ಜಮ್ಮು, ಜೂ. ೯: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ೯ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೩೩ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ೫೩ ಆಸನಗಳ ಬಸ್, ಶಿವ ಖೋರಿ ದೇವಸ್ಥಾನದಿಂದ ಕತ್ರಾ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಚಲಿಸುತ್ತಿದ್ದ ವೇಳೆಯೇ ದಾಳಿ ನಡೆಸಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಬಿದ್ದಿದೆ. ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಬಳಿ ಸಂಜೆ ೬.೧೫ ರ ಸುಮಾರಿಗೆ ಈ ದಾಳಿ ನಡೆದಿದೆ. ಘಟನೆಯಲ್ಲಿ ೯ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ೩೩ ಮಂದಿ ಗಾಯಗೊಂಡಿದ್ದಾರೆ ಎಂದು ರಿಯಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ದಾಳಿಯು ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ. ನೆರೆಯ ಪ್ರದೇಶಗಳಾದ ರಜೌರಿ ಮತ್ತು ಪೂಂಚ್‌ಗೆ ಹೋಲಿಸಿದರೆ ರಿಯಾಸಿ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಎನ್ನಲಾಗಿದೆ.
ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ!
ಬೆAಗಳೂರು, ಜೂ. ೯: ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆರಂಭಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶ, ಸಮಗ್ರ ಅಭಿವೃದ್ಧಿ ಯೋಜನಾ ಪ್ರದೇಶ (ಸಿಡಿಪಿ), ಶಿವರಾಮ ಕಾರಂತ ಬಡಾವಣೆ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣ ಆಗುತ್ತಿರುವುದು ಗಮನಕ್ಕೆ ಬಂದಿದ್ದು, ನಿರ್ಮಾಣಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ. ಖಾಸಗಿ ಬಡಾವಣೆ ನಿರ್ಮಾಣಕ್ಕೆ ಬಿಡಿಎಯಿಂದ ಬಡಾವಣೆ ನಕ್ಷೆಯ ಅನುಮೋದನೆ ಯನ್ನು ಪಡೆದುಕೊಳ್ಳಬೇಕು. ನಂತರ ಬಡಾವಣೆಯನ್ನು ರಚಿಸಿ, ನಿವೇಶನವನ್ನು ಹಂಚಿಕೆ ಮಾಡಬೇಕು. ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆಯದೇ ಬಡಾವಣೆಯನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಜೆ.ಬಿ. ಕಾವಲ್ ಗ್ರಾಮದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆಯ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ. ಅನಧಿಕೃತ ಬಡಾವಣೆ ನಿರ್ಮಾಣ, ನಿವೇಶನಗಳ ಮಾರಾಟ ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ವೇಳೆ ಎಚ್ಚರಿಕೆ ನೀಡಿದೆ.
ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಕೆ!
ಬೆಂಗಳೂರು, ಜೂ. ೯: ಕೇಂದ್ರ ಸರ್ಕಾರದ ‘ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯಡಿ ಮನೆಗಳ ಛಾವಣಿ ಮೇಲೆ ಸೌರ ಫಲಕ ಅಳವಡಿಸಿಕೊಳ್ಳಲು ರಾಜ್ಯದಲ್ಲಿ ೧೦ ಸಾವಿರ ಜನ ಆಸಕ್ತಿವಹಿಸಿ, ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಕರ್ನಾಟಕ ಇಂಧನ ಇಲಾಖೆ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಯೋಜನೆಯನ್ನು ಜನಪ್ರಿಯಗೊಳಿಸುವ ರಾಷ್ಟಿçÃಯ ಕಾರ್ಯಾಗಾರದಲ್ಲಿ ಮಾತನಾಡಿದ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಜಂಟಿ ಕಾರ್ಯದರ್ಶಿ ದಿನೇಶ್ ದಯಾನಂದ ಜಗದಾಳೆ ಅವರು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯೊಂದಿಗೆ ಸೌರಶಕ್ತಿಯನ್ನು ಜನಪ್ರಿಯಗೊಳಿಸುತ್ತಿದೆ. ರಾಜ್ಯದಲ್ಲಿ ಅಳವಡಿಸಲಾಗಿರುವ ೨೨,೦೦೦ ಪ್ಯಾನಲ್‌ಗಳಲ್ಲಿ ೯,೩೭೭ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ಮಿತಿಯಲ್ಲಿದ್ದು, ೩೦೧.೭ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ಹೇಳಿದರು. ಇಲ್ಲಿಯವರೆಗೆ, ದೇಶಾದ್ಯಂತ ೧೦ ಮಿಲಿಯನ್ ಜನರು ಈ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ, ಅದರಲ್ಲಿ ೧೦,೦೦೦ ಮಂದಿ ಕರ್ನಾಟಕದವರಾಗಿದ್ದಾರೆಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗೌರವ್ ಗುಪ್ತಾ ಅವರು, ಮನೆ ಛಾವಣಿ ಮೇಲೆ ಒಂದು ಕಿಲೋವಾಟ್ ಸಾಮರ್ಥ್ಯದ ವ್ಯವಸ್ಥೆಗೆ ರೂ. ೩೦ ಸಾವಿರ, ಎರಡು ಕಿ.ವಾ.ಗೆ ರೂ. ೬೦ ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿದೆ. ಮೂರು ಕಿ.ವಾ. ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ರೂ. ೭೮ ಸಾವಿರ ಸಬ್ಸಿಡಿ ಮಿತಿಯಿದೆ. ಸೂರಿನ ಮೇಲೆ ಸೌರ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿAದ ೨೫ ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಸೋಲಾರ್ ಫಲಕಕ್ಕೆ ಮನೆಗಳ ಛಾವಣಿ ಜಾಗ ಬಳಸುವ ಕಾರಣ ಹೆಚ್ಚುವರಿ ಜಾಗದ ಅವಶ್ಯಕತೆಯಿಲ್ಲ, ನಿರ್ವಹಣೆ ವೆಚ್ಚ ತೀರಾ ಕಡಿಮೆ. ಉಚಿತವಾಗಿ ವಿದ್ಯುತ್ ಲಭಿಸುತ್ತಿದೆ ಎಂದು ಹೇಳಿದರು.
ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ನಾಯ್ಡು!
ಹೈದರಾಬಾದ್, ಜೂ. ೯: ಮಾಧ್ಯಮ ಲೋಕದ ದಿಗ್ಗಜ ‘ಈನಾಡು' ಸಮೂಹದ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (೮೭) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ರಾಮೋಜಿ ಫಿಲಂ ಸಿಟಿಯಲ್ಲಿ ಸಕಲ ವಿಧಿವಿಧಾನ, ಸರಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಿತು. ರಾಮೋಜಿ ಅವರ ಪುತ್ರ ಕಿರಣ್ ಅವರು ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು. ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದರು. ಅಂತ್ಯಕ್ರಿಯೆ ನಡೆಯುವ ಸ್ಥಳದ ಸಮೀಪ ಅವರು ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟರು. ಈ ಮೂಲಕ ಬಹುಕಾಲದ ಆತ್ಮೀಯ ಬಾಂಧವ್ಯಕ್ಕೆ ಗೌರವ ಸಮರ್ಪಿಸಿದರು. ಸುದ್ದಿ ಮತ್ತು ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಾಮೋಜಿ ರಾವ್ ಅವರು ಶನಿವಾರ ಮುಂಜಾನೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಅವಿಭಜಿತ ಆಂಧ್ರಪ್ರದೇಶದಲ್ಲಿ ಈನಾಡು ಪತ್ರಿಕೆ ಮತ್ತು ಈಟಿವಿ ಗ್ರೂಪ್ ವಾಹಿನಿಗಳ ಮೂಲಕ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ್ದ ರಾಮೋಜಿ ರಾವ್ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಆಂಧ್ರಪ್ರದೇಶ ಸರ್ಕಾರ ಜೂನ್ ೯ ಮತ್ತು ೧೦ ರಂದು ರಾಜ್ಯ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ಅವರ ನಿಧನಕ್ಕೆ ರಾಷ್ಟçಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
೪ ಇಸ್ರೇಲ್ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ವೇಳೆ ವೈಮಾನಿಕ ದಾಳಿ
ಪ್ಯಾಲೇಸ್ತೀನ್, ಜೂ. ೯: ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳು ಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ಇಸ್ರೇಲ್ ಕೇಂದ್ರ ಗಾಜಾದಲ್ಲಿ ನೆಲ ಮತ್ತು ವಾಯುದಾಳಿಗಳನ್ನು ನಡೆಸುತ್ತಿದೆ. ಈ ಇಸ್ರೇಲ್ ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮ ನಾಲ್ಕು ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆ. ೨೬ ವರ್ಷದ ನೋಹ್ ಅರ್ಗಾಮಣಿ, ೨೨ ವರ್ಷದ ಅಲ್ಮೊಗ್ ಮೀರ್ ಜಾನ್, ೨೭ ವರ್ಷದ ಆಂಡ್ರೆ ಕೊಜ್ಲೋವ್ ಮತ್ತು ೪೧ ವರ್ಷದ ಶ್ಲೋಮಿ ಝಿವ್ ಅವರನ್ನು ರಕ್ಷಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇವರೆಲ್ಲಾ ಕಳೆದ ೨೪೬ ದಿನಗಳಿಂದ ಹಮಾಸ್ ವಶದಲ್ಲಿದ್ದು ಇದೀಗ ರಕ್ಷಿಸಲಾಗಿದೆ. ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇನ್ನು ತಮ್ಮ ಮಕ್ಕಳ ಮನೆ ಸೇರಿರುವುದು ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಹೋರಾಟವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಕಾರ್ಯಾಚರಣೆಯ ನಂತರ ಸದ್ಯ ೨೩ ಮಕ್ಕಳು ಮತ್ತು ೧೧ ಮಹಿಳೆಯರು ಸೇರಿದಂತೆ ೧೦೯ ಪ್ಯಾಲೆಸ್ಟೀನಿಯನ್ನರ ಶವಗಳನ್ನು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಾಯಗೊಂಡಿರುವ ೧೦೦ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ಯಾಲೇಸ್ತಿನ್‌ನ ಅಲ್ಲಿನ ವಕ್ತಾರ ಖಲೀಲ್ ದೆಘ್ರನ್ ಹೇಳಿದರು. ಇಸ್ರೇಲ್ ದಾಳಿಯಲ್ಲಿ ಒಟ್ಟಾರೆಯಾಗಿ ೨೭೪ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.