ಮಡಿಕೇರಿ, ಜೂ. ೯: ವ್ಯಕ್ತಿಯೋರ್ವನ ವಾಹನವನ್ನು ಅಡ್ಡಗಟ್ಟಿ ತಲೆಯ ಭಾಗಕ್ಕೆ ಪಿಸ್ತೂಲ್ ನಿಂದ ಹಲ್ಲೆ ನಡೆಸಿದ ಘಟನೆ ತಾ. ೮ರ ರಾತ್ರಿ ಭಗವತಿನಗರದಲ್ಲಿ ನಡೆದಿದ್ದು, ಭಗವತಿ ನಗರದ ನಿವಾಸಿ ಕಾಶಿ ಕಾವೇರಪ್ಪ ಸೇರಿದಂತೆ ಭುವನ್ ಹಾಗೂ ಬೆಳ್ಯಪ್ಪ ಎಂಬವರ ವಿರುದ್ಧ ಹಲ್ಲೆಗೊಳಗಾದ ಸಾಗರ್ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹಲ್ಲೆಗೊಳಗಾದ ಮುತ್ತಪ್ಪ ದೇವಾಲಯ ಬಳಿಯ ನಿವಾಸಿ ಸಾಗರ್ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದಲ್ಲಿರುವ ಸಾಗರ್ ಅವರು ತಾ.೮ರ ರಾತ್ರಿ ೯.೪೫ಕ್ಕೆ ತಮ್ಮ ಸಹೋದರಿಯನ್ನು ಅವರು ತಂಗಿದ್ದ ಭಗವತಿನಗರದಲ್ಲಿನ ಮನೆಯಿಂದ ಮುತ್ತಪ್ಪ ದೇವಾಲಯದ ಬಳಿ ಇರುವ ಮನೆಗೆ ಪಿಕಪ್ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದಾಗ ಭಗವತಿನಗರದ ಅಂಗನವಾಡಿ ಬಳಿ ಕಾಶಿ ಕಾವೇರಪ್ಪ ಎಂಬವರು ಕೆಂಪು ಬಣ್ಣದ ಕ್ರೆಟ ಕಾರಿನಲ್ಲಿ ಸಾಗರ್ ಚಲಿಸುತ್ತಿದ್ದ ಪಿಕಪ್ ವಾಹನವನ್ನು ಅಡ್ಡಗಟ್ಟಿದ್ದಾನೆ. ನಂತರ ನೆಲಕ್ಕೆ ೨ ಬಾರಿ ಗುಂಡು ಹಾರಿಸಿದ್ದಾನೆ. ಗಾಬರಿ ಗೊಂಡ ಸಾಗರ್ ಹಾಗೂ ಅವರ ಸಹೋದರಿ ಕೆಳಗೆ ಇಳಿದಿದ್ದಾರೆ. ಈ ಸಂದರ್ಭ ಹಿಂದಿನಿAದ ವ್ಯಾನ್ ಹಾಗೂ ಎರಡು ಬೈಕ್‌ಗಳಲ್ಲಿ ಕೂಡ ಹಲವು ಮಂದಿ ಬಂದಿದ್ದಾರೆ.

ನಂತರ ವಾಹನ ದಿಂದ ಕೆಳಗಿಳಿದಿದ್ದ ಸಾಗರ್ ಅವರ ತಲೆಯ ಭಾಗಕ್ಕೆ ಪಿಸ್ತೂಲ್‌ನಿಂದ ಹೊಡೆದ ಕಾಶಿ, ತಲೆಗೆ ತೀವ್ರ ಗಾಯಗೊಳಿಸಿದ್ದಾನೆ. ಬಳಿಕ ಭುವನ್, ಬೆಳ್ಯಪ್ಪ ಎಂಬವರು ಸೇರಿದಂತೆ ಇತರ ಮೂವರು ಅಪರಿಚಿತರು ಕೂಡ ಸಾಗರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಸಾಗರ್ ಅವರ ಸಹೋದರಿ ಅಳಲು ಪ್ರಾರಂಭಿಸಿದಾಗ ಕಾಶಿ ಸೇರಿದಂತೆ ಇತರರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂಬುದಾಗಿ ಸಾಗರ್ ಅವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ನಂತರ ಜಿಲ್ಲಾಸ್ಪತ್ರೆಗೆ ತೆರಳಿದ ಸಾಗರ್, ತಲೆಯ ಭಾಗಕ್ಕೆ ಹೊಲಿಗೆ ಹಾಕಿಸಿಕೊಂಡಿದ್ದಾರೆ. ಹಲ್ಲೆ ಮಾಡಿದವರು ಆಸ್ಪತ್ರೆಗೂ ಸಾಗರ್‌ನನ್ನು ಹಿಂಬಾಲಿಸಿಕೊAಡು ಬಂದಿದ್ದಾರೆ. ಭಯದಿಂದ ಚಿಕಿತ್ಸೆ ಪಡೆದ ಬಳಿಕ ಸಾಗರ್ ಅವರು ವಾಪಸ್ಸು ಮನೆಗೆ ತೆರಳಿದ್ದಾರೆ. ಇಂದು ಮತ್ತೆ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ ಸಾಗರ್ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.