ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಹತ್ಯೆ
ಮೈಸೂರು, ಜೂ. ೧೦: ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ೯೦ ವರ್ಷದ ಶಿವಾನಂದ ಸ್ವಾಮೀಜಿ ಯವರನ್ನು ಆಪ್ತ ಸಹಾಯಕ ರವಿ (೬೦) ಎಂಬಾತ ಸೋಮವಾರ ಮಾರಕಾಸ್ತçಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸ್ವಾಮೀಜಿ ಆಪ್ತ ಸಹಾಯಕ ರವಿ(೬೦) ಎಂಬಾತನಿAದ ಕೃತ್ಯ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ನಜರ್ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರವಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ ಎಂದು ತಿಳಿದಿದೆ. ಅನ್ನದಾನೇಶ್ವರ ಮಠವು ಸುಮಾರು ೯ ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳಾಗಿದ್ದವು. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನರ ತೀರ್ಪು ಎಚ್ಚರಿಕೆ ಗಂಟೆ : ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ. ೧೦: ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದ್ದು, ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕುಮಾರಪಾರ್ಕ್ ಸರಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು. ಲೋಕಸಭೆ ಫಲಿತಾಂಶದ ಕುರಿತ ಪರಾಮರ್ಶೆ ಬಗ್ಗೆ ಪ್ರಶ್ನಿಸಿದಾಗ, ಲೋಕಸಭಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಜೊತೆ ಪರಾಮರ್ಶನಾ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಏಕೆ ಹೆಚ್ಚುಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಭೆ ನಡೆಸಲಾಗುವುದು. ಶೀಘ್ರವೇ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಹಾಗೂ ಪರಿಹಾರ ಹುಡುಕುವ ಕೆಲಸ ಆಗಬೇಕು ಎಂದು ತಿಳಿಸಿದರು. ಕರ್ನಾಟಕ, ಹಿಮಾಚಲ ಪ್ರದೇಶದ ಚುನಾವಣೆಯ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದಾಗ ನಾವು ೧೪- ೧೫ ಸ್ಥಾನಗಳನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ನಾವು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು ಎಂದರು. ಪ್ರಮುಖ ನಾಯಕರ ಊರುಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣಗೆ ಸಂಕಷ್ಟ: ೧೪ ದಿನಗಳ ಕಾಲ ನ್ಯಾಯಾಂಗ ಬಂಧನ
ಬೆAಗಳೂರು, ಜೂ. ೧೦: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಆಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಜ್ವಲ್ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಎಸ್ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಅವರನ್ನು ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಇದೀಗ ಬೆಂಗಳೂರಿನ ೪೨ನೇ ಎಸಿಎಂ ನ್ಯಾಯಾಲಯವು ಜೂನ್ ೨೪ ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಈ ವೇಳೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ಗೆ ೧೪ ದಿನಗಳ ಕಾಲ ಅಂದರೆ ಜೂನ್ ೨೪ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಕೋರ್ಟಿಗೆ ಹಾಜರುಪಡಿಸಿದ್ದ ವೇಳೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣಗೆ ಜೂನ್ ೨೪ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ನ್ಯಾಯಾಲಯವು ಮೇ ೩೧ ರಂದು ಪ್ರಜ್ವಲ್ ರನ್ನು ಜೂನ್ ೬ ರವರೆಗೆ ಎಸ್ಐಟಿ ವಶಕ್ಕೆ ನೀಡಿತು ಮತ್ತು ನಂತರ ಅದನ್ನು ಜೂನ್ ೧೦ ರವರೆಗೆ ವಿಸ್ತರಿಸಿತು.
ಶಕ್ತಿ ಯೋಜನೆ'ಗೆ ವರ್ಷದ ಹರ್ಷ: ೩,೩೪೯ ಕೋಟಿ ಆದಾಯ!
ಬೆಂಗಳೂರು, ಜೂ. ೧೦: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮತ್ತು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಒಂದು ವರ್ಷ ತುಂಬಿದ್ದು, ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯ ಬಲವನ್ನು ಹೆಚ್ಚಿಸಿದೆ. ಯೋಜನೆಯ ಅಡಿಯಲ್ಲಿ ಸಾರಿಗೆ ಸಂಸ್ಥೆಯು ಪ್ರಸಕ್ತ ೨೦೨೩-೨೪ ಆರ್ಥಿಕ ವರ್ಷದಲ್ಲಿ ೩,೩೪೯ ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾತನಾಡಿ, ಕೆಎಸ್ಆರ್ಟಿಸಿಯ ಒಟ್ಟು ಸಂಚಾರ ಆದಾಯ ೨೦೧೬ ರಲ್ಲಿ ೨,೭೩೮ ಕೋಟಿ ರೂ ಆಗಿತ್ತು. ೨೦೧೭ ರಲ್ಲಿ ೨,೯೭೫ ಕೋಟಿ ರೂ., ೨೦೧೮ ರಲ್ಲಿ ೩,೧೩೧ ಕೋಟಿ ರೂ., ೨೦೧೯ ರಲ್ಲಿ ೩,೧೮೨ ಕೋಟಿ ರೂ, ೨೦೨೧ ರಲ್ಲಿ ರೂ ೨,೦೩೭ ಕೋಟಿ ಮತ್ತು ೨೦೨೨ ರಲ್ಲಿ ರೂ ೩,೩೪೯ ಕೋಟಿಗಳು ಬಂದಿತ್ತು. ಶಕ್ತಿ ಯೋಜೆ ಜಾರಿಯಾದ ಬಳಿಕ ಅಂದರೆ ೨೦೨೩ ರ ಆದಾಯವು ರೂ ೩,೯೩೦ ಕೋಟಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ೨೦೨೩ರ ಜೂನ್ನಿಂದ ೨೦೨೪ರ ಮೇ ವರೆಗೆ ಒಟ್ಟು ೪,೮೦೯ ಕೋಟಿ ರೂ.ಗಳ ಆದಾಯ ಬಂದಿದ್ದು, ಶಕ್ತಿಯೇತರ ಪ್ರಯಾಣಿಕರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.