ಮಡಿಕೇರಿ, ಜೂ. ೧೧: ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಕೆಲವು ಯೋಜನೆಗಳ ಪರಾಮರ್ಶೆಯ ಅಗತ್ಯತೆ ಇದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಪ್ರತಿಪಾದಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಈ ಯೋಜನೆ ಸ್ಥಗಿತಗೊಳ್ಳಬಾರದು. ಆದರೆ, ಪರಾಮರ್ಶೆಗೆ ಒಳಪಡಿಸಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಕೆಲ ಬದಲಾವಣೆ ಮಾಡಿ ಜನರಿಗೆ ಮುಟ್ಟಿಸಬೇಕಾಗಿದೆ. ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳಲ್ಲಿ ಕೆಲವೊಂದು ಲೋಪ-ದೋಷ ಕಂಡುಬರುತ್ತಿದೆ. ಒಂದು ವರ್ಷದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದಲ್ಲೂ ಕೆಲವೊಂದು ಸಮಸ್ಯೆ ಇರುವುದು ಪತ್ತೆಯಾಗುತ್ತಿದೆ. ಗೃಹಜ್ಯೋತಿ ಎಲ್ಲಾ ವರ್ಗದವರಿಗೂ ದೊರೆಯುತ್ತಿರುವ ಪರಿಣಾಮ ವಿದೇಶದಲ್ಲಿ ವಾಸ ಮಾಡುತ್ತಿ ರುವವರು, ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಿರುವವರು, ಉನ್ನತ ಉದ್ಯೋಗದಲ್ಲಿರುವವರು ಇದರ ಫಲಾನುಭವಿಗಳಾಗಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಬಡವರ್ಗಕ್ಕೆ ಸೀಮಿತಗೊಳಿಸಿ ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕೆಲಸವಾಗಬೇಕಾಗಿದೆ. ಶಕ್ತಿ ಯೋಜನೆಯ ಲಾಭವೂ ಶ್ರೀಮಂತ ವರ್ಗಕ್ಕೆ ಸೇರುತ್ತಿದೆ. ಈ ನಿಟ್ಟಿನಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಿಸಿದರು.
ಯದುವೀರ್ ಕೊಡಗಿನ ಧ್ವನಿಯಾಗಲಿ
ನೂತನ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡಗಿನ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಲಕ್ಷö್ಮಣ್ ಹೇಳಿದರು. ಹಾಲಿ ಸಂಸದರು ಕೊಡಗಿನ ಜನರ ನಿರೀಕ್ಷೆಗೆ ತಕ್ಕ ಯೋಜನೆಯನ್ನು ತರಬೇಕು ೫ ವರ್ಷ ಕಳೆದ ನಂತರ ಕೊಡಗಿನ ಕಡೆ ಮುಖ ಮಾಡಬೇಡಿ. ಇಂದಿನಿAದಲೇ ಕೆಲಸ ಆರಂಭಿಸಿ, ಕೊಡಗಿನ ಬೇಕು-ಬೇಡಿಕೆ ಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
(ಮೊದಲ ಪುಟದಿಂದ)
ಸೋಲಿಗೆ ನಾನೇ ಕಾರಣ
೬,೫೬,೨೪೧ ಮತದಾರರು ತನ್ನನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರು. ಕೊಡಗಿನ ೨ ಶಾಸಕರು ಕ್ಷೇತ್ರ ವ್ಯಾಪ್ತಿಯ ೫ ಹಾಲಿ ಎಂ.ಎಲ್.ಎ.ಗಳು, ೩ ಪರಾಜಿತ ಅಭ್ಯರ್ಥಿಗಳು, ನಾಯಕರು, ಕಾರ್ಯಕರ್ತರು ಹಗಲಿರುಳು ಗೆಲುವಿಗಾಗಿ ಶ್ರಮಿಸಿದ್ದಾರೆ. ತನ್ನ ಸೋಲಿಗೆ ತಾನೇ ಕಾರಣ ಹೊರತು ಪಕ್ಷವಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆತ್ಮಾವಲೋಕನ ನಡೆಸಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆೆ. ವಾರದಲ್ಲಿ ಒಮ್ಮೆ ಮಡಿಕೇರಿಯಲ್ಲಿ ಜನರಿಗೆ ಸಿಗುತ್ತೇನೆ. ಇನ್ನೂ ೪ ವರ್ಷ ನಮ್ಮ ಸರಕಾರ ಇರುತ್ತದೆ. ಜನರ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸಿ ಪರಿಹರಿಸುವ ಕೆಲಸ ತನ್ನಿಂದ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕುಮಾರಸ್ವಾಮಿ ನಿಲುವು ತೋರಬೇಕು’
ಕೇಂದ್ರ ಸರಕಾರದಲ್ಲಿ ಕ್ಯಾಬಿನೆಟ್ ಖಾತೆ ಹೊಂದಿರುವ ಹೆಚ್.ಡಿ.ಕುಮಾರಸ್ವಾಮಿ ಕರ್ನಾಟಕದ ವಿಷಯದ ಬಗ್ಗೆ ನಿಲುವು ತೋರಿ ಕೇಂದ್ರದ ಗಮನ ಸೆಳೆಯಬೇಕೆಂದು ಆಗ್ರಹಿಸಿದರು.
ಕಾವೇರಿ ನೀರು ಹಂಚಿಕೆ ವಿವಾದ, ಮೇಕೆದಾಟು ಅಣೆಕಟ್ಟು, ಕಳಸ ಬಂಡೂರಿ, ಮಹಾದಾಯಿ, ಆಲ್ಮಟ್ಟಿ ಅಣೆಕಟ್ಟು ಉನ್ನತೀಕರಣ, ಪಾರಂಪರಿಕ ಅರಣ್ಯ ಹಕ್ಕು ಯೋಜನೆ, ಕಸ್ತೂರಿ ರಂಗನ್ ವರದಿ, ರಾಜ್ಯದ ಪಾಲಿನ ಜಿ.ಎಸ್.ಟಿ., ಬರ ಪರಿಹಾರ ಹೀಗೆ ಅನೇಕ ವಿಷಯಗಳ ಬಗ್ಗೆ ಕುಮಾರಸ್ವಾಮಿ ಮಾತನಾಡಬೇಕು. ಸಾಲ ಮನ್ನಾ ಬಗ್ಗೆಯೂ ಚರ್ಚಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವೂ ನಿಮ್ಮ ಜೊತೆಗಿರುತ್ತದೆ. ಬೆಂಗಳೂರಿನಲ್ಲಿ ೧೦ ದೊಡ್ಡ ಕೈಗಾರಿಕೆ ಮುಚ್ಚಲ್ಪಟ್ಟಿದೆ. ಈ ಖಾತೆ ಕುಮಾರಸ್ವಾಮಿ ಅವರ ಕೈಯಲ್ಲಿರುವುದರಿಂದ ರಾಜ್ಯಕ್ಕೆ ಹೊಸ ಯೋಜನೆ ತರಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಜನತಾ ತೀರ್ಪನ್ನು ನಾವು ಸ್ವೀಕರಿಸುತ್ತೇವೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆಯುತ್ತೇವೆ. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶ್ರಮಿಸಿದ್ದರು. ಜನಾದೇಶಕ್ಕೆ ತಲೆಬಾಗುತ್ತೇವೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಆಪ್ಪಟ್ಟೀರ ಟಾಟು ಮೊಣ್ಣಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಜಿಲ್ಲಾ ಸದಸ್ಯರುಗಳಾದ ಮುಕ್ಕಾಟಿರ ಸಂದೀಪ್, ಚೊಟ್ಟೆಯಂಡಮಾಡ ವಿಶು ರಂಜಿ ಹಾಜರಿದ್ದರು.