ಕೂಡಿಗೆ, ಜೂ. ೧೦: ಹೆಗ್ಗಡಹಳ್ಳಿ ಶ್ರೀ ಶನೈಶ್ವರ ಸ್ವಾಮಿ ದೇವಸ್ಥಾನ ವತಿಯಿಂದ ಶನೈಶ್ವರ ಜಯಂತಿ ಪ್ರಯುಕ್ತ ಶನೇಶ್ವರ ಸ್ವಾಮಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗಣಯಾಗ, ನವಕಲಶಾರಾಧನೆ, ಪ್ರಧಾನ ಹೋಮ, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಪೂರ್ಣಾಹುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾತಿ ಬಳಿಕ ಅನ್ನಸಂತರ್ಪಣೆ ನೆರವೇರಿತು.
ನಂತರ ಹಾರಂಗಿ ನದಿಯಲ್ಲಿ ಶ್ರೀ ಸ್ವಾಮಿ ವಿಗ್ರಹದ ಜಳಕದ ನಂತರ ಅಲಂಕೃತ ಭವ್ಯ ರಥದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ರಂಗಪೂಜೆ, ಧರ್ಮಸ್ಥಳದ ರಾಮಚಂದ್ರ ತಂತ್ರಿ ಮತ್ತು ತಂಡದವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭ ಎಲ್ಲೂಬಾಯಿ ಅವರ ಕುಟುಂಬಸ್ಧರು, ದೇವಾಲಯ ಸಮಿತಿಯ ಪ್ರಮುಖರಾದ ಸುನಿಲ್ ರಾವ್, ಅರುಣ್ ರಾವ್, ನಾಗರಾಜ್, ಕೂಡಿಗೆ ಕೂಡುಮಂಗಳೂರು, ಮದಲಾಪುರ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.