ಹೆಚ್.ಕೆ.ಜಗದೀಶ್
ಗೋಣಿಕೊಪ್ಪಲು, ಜೂ. ೧೧ : ಕೊಡಗು - ಮೈಸೂರು ಜಿಲ್ಲೆಗಳ ನಡುವಿನ ಗಡಿ ಭಾಗವಾದ ಆನೆಚೌಕೂರು ಗೇಟ್ ಅಕ್ರಮ ಚಟುವಟಿಕೆಗಳಿಗೆ ರಾಜಮಾರ್ಗವಾಗಿ ಪರಿವರ್ತನೆಗೊಂಡಿದೆ. ಜಾನುವಾರುಗಳು ಸೇರಿದಂತೆ ಅಕ್ರಮ ಸಾಗಾಟ ಎಗ್ಗಿಲ್ಲದಂತೆ ನಡೆಯುತ್ತಿದ್ದು, ಮುಂಜಾನೆ ೩ ಗಂಟೆಯಿAದ ೫ ಗಂಟೆಯ ವೇಳೆಗೆ ಆನೆಚೌಕೂರು ಗಡಿ ಭಾಗದಿಂದ ದನ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕೊಡಗಿನ ಗಡಿ ಭಾಗವಾದ ಕುಟ್ಟ, ಮಾಕುಟ್ಟ, ಮಾಲ್ದಾರೆ ಹಾಗೂ ಆನೆಚೌಕೂರು ಗಡಿಯಲ್ಲಿ ಪೊಲೀಸರು ಈ ಹಿಂದೆ ತಪಾಸಣೆ ನಡೆಸುತ್ತಿದ್ದರು. ಇದರಿಂದ ಅಕ್ರಮ ಚಟುವಟಿಕೆಗಳು ಹತೋಟಿಗೆ ಬಂದಿದ್ದವು. ಕಳೆದ ಕೆಲವು ತಿಂಗಳುಗಳಿAದ ಕೊಡಗಿನ ಗಡಿ ಭಾಗವಾದ ಕುಟ್ಟ, ಮಾಕುಟ್ಟ, ಹೊರತುಪಡಿಸಿ ಆನೆಚೌಕೂರು ಗಡಿಯಲ್ಲಿ ಮಾತ್ರ ಪೊಲೀಸರ ನಿಯೋಜನೆಯನ್ನು ಇಲಾಖೆ ಹಿಂದಕ್ಕೆ ಪಡೆದಿದೆ.
ಆನೆಚೌಕೂರು ಗಡಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ತಪಾಸಣೆ ನಡೆಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಮರ ಸಾಗಾಟದ ಬಗ್ಗೆ ಮಾತ್ರ ಪರಿಶೀಲನೆ ನಡೆಸುತ್ತಾರೆ. ಇತರ ವಾಹನಗಳ ತಪಾಸಣೆ ಮಾಡುವುದಿಲ್ಲ. ಪೊಲೀಸರ ನಿಯೋಜನೆ ಗಡಿಯಲ್ಲಿ ಇಲ್ಲದಿರುವುದರ
(ಮೊದಲ ಪುಟದಿಂದ) ದುರ್ಲಾಭ ಪಡೆದುಕೊಂಡಿರುವ ಕಿಡಿಗೇಡಿಗಳು ಈ ಮಾರ್ಗದಿಂದ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಮುಂಜಾನೆ ವೇಳೆ ಅಷ್ಟಾಗಿ ವಾಹನ ಸಂಚಾರ ಇಲ್ಲದಿರುವುದನ್ನು ಮನದಟ್ಟು ಮಾಡಿಕೊಂಡಿರುವ ದಂಧೆಕೋರರು ಈ ಸಮಯದಲ್ಲಿ ವಾಹನದ ಮೂಲಕ ಅಕ್ರಮ ಜಾನುವಾರು ಸಾಗಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ.
ಪೊಲೀಸರ ನಿಯೋಜನೆ ಇದ್ದ ಸಂದರ್ಭ ಆನೆಚೌಕೂರು ಗಡಿಯಲ್ಲಿ ದಂಧೆಕೋರರು ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಘಟನೆಯೂ ನಡೆದಿತ್ತು. ಇತ್ತೀಚೆಗೆ ಪೊಲೀಸರು ಇಲ್ಲದಿರುವುದರಿಂದ ಅಕ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅಕ್ರಮ ದಂಧೆಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೊಡಗಿನ ಪ್ರಮುಖ ಗಡಿಯಾಗಿರುವ ತಿತಿಮತಿ ಬಳಿಯ ಆನೆಚೌಕೂರು ಗಡಿಯಲ್ಲಿ ಪೊಲೀಸರ ನಿಯೋಜನೆ ಅಗತ್ಯವಾಗಿದ್ದು, ಇದರಿಂದ ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹೇರಬಹುದಾಗಿದೆ ಎಂದು ನಾಗರಿಕರು ಅಭಿಪ್ರಾಯಿಸಿದ್ದಾರೆ.