ಮಡಿಕೇರಿ, ಜೂ. ೧೦: ಸುಭದ್ರ ದೇಶಕ್ಕಾಗಿ ಕೊಡಗಿನ ಸ್ವಾಭಿಮಾನಿ ಮತದಾರರು ಕಾಂಗ್ರೆಸ್‌ನ ಬಿಟ್ಟಿಭಾಗ್ಯಗಳನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆ ಎಂದೆAದಿಗೂ ಬಿಜೆಪಿಯ ಭದ್ರಕೋಟೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಯದುವೀರ್ ಅವರಿಗೆ ೭೩ ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯನ್ನು ನೀಡಿದ್ದಾರೆ.

ಜನರ ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಜನರಿಗೆ ಬೇಡವಾದ ಬಿಟ್ಟಿಭಾಗ್ಯಗಳಿಗೆ ಮೀಸಲಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಮತದಾರರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾಗಿದ್ದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರುಗಳು ಮತ ಗಳಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಎಂಟೂವರೆ ಸಾವಿರ ರೂ. ಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಘೋಷಿಸಿದರೂ ಮತದಾರ ಈ ಭರವಸೆಗೆ ಮಣೆ ಹಾಕದೇ ಇರುವುದನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.