ಸೋಮವಾರಪೇಟೆ, ಜೂ.೧೦: ಪಟ್ಟಣದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರನ್ನು ಠಾಣೆಗೆ ಕರೆತಂದ ಪೊಲೀಸರು, ಅವರುಗಳಿಗೆ ಸಂಚಾರ ನಿಯಮಗಳ ಬಗ್ಗೆ ಕೆಲ ಕಾಲ ಕ್ಲಾಸ್ ತೆಗೆದುಕೊಂಡರು.

ಸAತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಬೇಕಾಬಿಟ್ಟಿ ವಾಹನಗಳ ಪಾರ್ಕಿಂಗ್, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣ, ತ್ರಿಬಲ್ ರೈಡಿಂಗ್, ಏಕಮುಖ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಇನ್ನಿತರ ನಿಯಮ ಮೀರಿದ ಮಂದಿಯನ್ನು ತಮ್ಮದೇ ವಾಹನಗಳಲ್ಲಿ ಠಾಣೆಗೆ ಕರೆತಂದ ಸಿಬ್ಬಂದಿಗಳು, ಅವರುಗಳನ್ನೆಲ್ಲಾ ಒಂದು ಗೂಡಿಸಿ ನೀತಿಪಾಠ ಹೇಳಿದರು.

ಸಂಚಾರಿ ನಿಯಮ ಉಲ್ಲಂಘನೆ, ಅಸುರಕ್ಷಿತ ವಾಹನ ಚಾಲನೆಯಿಂದ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ದುರ್ಘಟನೆಗಳು ಸಂಭವಿಸಿದ ನಂತರ ಪಶ್ಚಾತ್ತಾಪ ಪಡುವ ಬದಲು ಪ್ರತಿನಿತ್ಯ ಸುರಕ್ಷಿತ ವಿಧಾನಗಳನ್ನು ಅನುಸರಿಸಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಠಾಣಾಧಿಕಾರಿ ರಮೇಶ್‌ಕುಮಾರ್ ಹೇಳಿದರು.

ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಅಸುರಕ್ಷಿತವಾಗಿ ಚಲಾಯಿಸುತ್ತಿದ್ದ ಬೈಕ್, ಸ್ಕೂಟರ್, ಆಟೋ, ಕಾರು ಸೇರಿದಂತೆ ೫೦ಕ್ಕೂ ಅಧಿಕ ವಾಹನಗಳನ್ನು ಪತ್ತೆ ಹಚ್ಚಿ ಸಂಚಾರಿ ನಿಯಮ ಹಾಗೂ ಸುರಕ್ಷತೆ ಬಗ್ಗೆ ಚಾಲಕರಿಗೆ ಮಾಹಿತಿ ನೀಡಿ, ದಂಡ ವಸೂಲಾತಿ ಮಾಡಿದರು.

ಈ ಸಂದರ್ಭ ಠಾಣಾಧಿಕಾರಿ ಪ್ರಹ್ಲಾದ್, ಸಿಬ್ಬಂದಿಗಳಾದ ಲೋಹಿತ್, ಮಂಜು ಶೆಟ್ಟಿ. ಕಾಶೀನಾಥ್, ಮಹಿಳಾ ಪಿಎಸ್‌ಐ ಉಮಾ, ಸಿಬ್ಬಂದಿಗಳಾದ ಲೋಕೇಶ್, ಸುಧೀಶ್, ಮಲ್ಲೇಶ್, ಶರತ್ ಸೇರಿದಂತೆ ಇತರರು ಭಾಗಿಯಾಗಿದ್ದರು.