ಸೋಮವಾರಪೇಟೆ, ಜೂ. ೧೧: ತಮ್ಮ ಗ್ರಾಮದ ಸರ್ಕಾರಿ ಶಾಲೆ, ತಾವು ವಿದ್ಯಾಭ್ಯಾಸ ಮಾಡಿದ ಆವರಣ, ಪಾಠ, ಆಟ, ಓಟ, ಊಟದೊಂದಿಗೆ ಬಾಲ್ಯ ಕಳೆದ ತಮ್ಮೂರಿನ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದನ್ನು ಕಂಡು ಮರುಗಿದ ಗ್ರಾಮಸ್ಥರು, ಬರೋಬ್ಬರಿ ೧೫ ಲಕ್ಷ ವ್ಯಯಿಸಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ತರಗತಿ ಆರಂಭಿಸಿ ಸರಕಾರಿ ಶಾಲೆಯ ಸಬಲೀಕರಣಕ್ಕೆ ಹೆಜ್ಜೆಯಿಟ್ಟಿದ್ದಾರೆ.
ಇಂತಹ ಸಾಂಘಿಕ ಪ್ರಯತ್ನದ ಫಲವಾಗಿ ಆರಂಭಿಕ ವರ್ಷದಲ್ಲಿಯೇ ಎಲ್‌ಕೆಜಿಗೆ ೧೫ ವಿದ್ಯಾರ್ಥಿಗಳು ದಾಖಲಾಗಿದ್ದು, ಗ್ರಾಮಸ್ಥರು ಹಾಗೂ ಶಾಲಾ ಸಮಿತಿಯವರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ. ಇದು ನೇರುಗಳಲೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ಹೊಸ ಪ್ರಯೋಗ.
ಸರ್ಕಾರಿ ಶಾಲೆಯ ಉಳಿವಿನ ಆಶಯದೊಂದಿಗೆ ನೇರುಗಳಲೆ ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಬಳಗದ ಮೂಲಕ ಪೂರ್ವ ಪ್ರಾಥಮಿಕ ಶಾಲಾ ಸಮಿತಿಯನ್ನು ಸ್ಥಾಪಿಸಿ, ಎಲ್.ಕೆ.ಜಿ. ತರಗತಿಯನ್ನು ಆರಂಭಿಸಲಾಗಿದ್ದು, ಪ್ರಥಮ ಹಂತದಲ್ಲಿ ೧೫ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ನೇರುಗಳಲೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರಕಾರಿ ಶಾಲೆಗಳ ಸಬಲೀಕರಣದ ಆಶಯ ಹಾಗೂ ಗ್ರಾಮದ ಮಕ್ಕಳಿಗೆ ಗ್ರಾಮದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಮಿತಿಯನ್ನು ರಚಿಸಲಾಗಿದೆ.
ಇದರೊಂದಿಗೆ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡವನ್ನು ನವೀಕರಿಸಿ ಸುಮಾರು ಎಂಟು ಲಕ್ಷ ರೂ.ಗಳ ವೆಚ್ಚದಲ್ಲಿ ಮೂರು ಕೋಣೆ, ಮಕ್ಕಳಿಗೆ ಆಟಿಕೆ ವಸ್ತುಗಳು, ಮಕ್ಕಳ ಸ್ನೇಹಿ ಪೀಠೋಪಕರಣ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗೆ ಹೈಟೆಕ್ ಶೌಚಾಲಯ, ಸಾರಿಗೆ ವ್ಯವಸ್ಥೆ, ಹೊರಾಂಗಣ ಆಟದ ಮೈದಾನವನ್ನು ಸಿದ್ದಪಡಿಸಲಾಗಿದೆ.
ಮಕ್ಕಳನ್ನು ದಾಖಲು ಮಾಡಲು ಸಮಿತಿಯ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಷಕರ ಮನೆಗಳಿಗೆ ತೆರಳಿ ಪೋಷಕರ ಮನವೊಲಿಸಿ ಪ್ರಾರಂಭಿಕ ಹಂತದಲ್ಲಿಯೇ ೧೫ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಎಲ್‌ಕೆಜಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಇಂತಹ ಪುಣ್ಯದ ಕಾರ್ಯಕ್ಕೆ, ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಹಾಯ ಮಾಡಿದ್ದು, ಇಲಾಖೆಯ ಅನುದಾನವನ್ನು ಪಡೆದುಕೊಳ್ಳದೇ ನಾವು ಓದಿದ ಶಾಲೆ ಹಾಗೂ ನಮ್ಮೂರ ಶಾಲೆಯನ್ನು ಉಳಿಸಿಕೊಳ್ಳಲು ತೀರ್ಮಾನಿಸಿ ಸಮಿತಿಯವರು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಎಸ್.ಎಂ.ಡಿಸಿಲ್ವಾ, ಗಿರೀಶ್ ಮಲ್ಲಪ್ಪ, ವಿನೋದ್ ಕುಮಾರ್, ಶಿವದಾಸ್, ಲಲಿತಾ, ಸಮಿತಿ ಅಧ್ಯಕ್ಷ ಭೋಜೇಗೌಡ, ಪದಾಧಿಕಾರಿಗಳಾದ ವಿನಯ್ ಸಂಭ್ರಮ್, ಎ.ಹೆಚ್.ತಿಮ್ಮಯ್ಯ, ಸಮಿತಿ ಸಂಚಾಲಕ ರತ್ನಕುಮಾರ್, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.