ಕುಶಾಲನಗರ, ಜೂ. ೧೧: ಮಡಿಕೇರಿ ಕಡೆಯಿಂದ ಕುಶಾಲನಗರ ಮೂಲಕ ಮೈಸೂರಿನ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹರಳು ಕಲ್ಲು ಸಾಗಾಟ ದಂಧೆಯ ಆರೋಪಿ ಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕುಶಾಲನಗರ ವಾಹನ ತಪಾಸಣಾ ಗೇಟ್ ಬಳಿ ಪಿಕಪ್ ವಾಹನ ಒಂದರಲ್ಲಿ ಹರಳು ಕಲ್ಲುಗಳನ್ನು ಸಾಗಿಸುತ್ತಿದ್ದ ಸಂದರ್ಭ ಅಲ್ಲಿನ ಸಿಬ್ಬಂದಿಗಳು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು ೨೫೦೦ ಕೆಜಿ ತೂಕದ ಹರಳು ಕಲ್ಲು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಮಡಿಕೇರಿಯ ರಾಣಿಪೇಟೆಯ ಎಂ.ಜಿ. ಶಿವಪ್ರಸಾದ್ (೩೫), ಮಹದೇವ ಪೇಟೆಯ ಎಂ.ಎA. ಜಬೀರ್ (೪೦), ಆಜಾದ್ ನಗರದ ಎಂ.ಎ. ರಿಜ್ವಾನ್ (೪೫) ಎಂಬುವರುಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.

ಮುಂಜಾನೆ ೪ ಗಂಟೆಗೆ ಮಡಿಕೇರಿ ಕಡೆಯಿಂದ ಕುಶಾಲನಗರ ಮೂಲಕ ಮೈಸೂರಿಗೆ ಸಾಗಿಸುತ್ತಿದ್ದ ವೇಳೆ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು ಪಿಕಪ್ ವಾಹನ (ಏಂ ೨೧ ಅ ೬೫೭೪) ಮತ್ತು ಬೆಂಗಾವಲಾಗಿ ಸಂಚರಿಸುತ್ತಿದ್ದ ಆಲ್ಟೊ ಕಾರು (ಏಂ ೦೧ ಒಆ೧೮೦೮) ವಶಪಡಿಸಿಕೊಳ್ಳಲಾಗಿದೆ.

ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ, ಸಿದ್ದರಾಮಯ್ಯ ನಾಟಿಕಾರ್, ತಳವಾರ್, ಗೇಟ್ ಸಿಬ್ಬಂದಿಗಳಾದ ಮೇದಪ್ಪ, ಆರ್ ಆರ್ ಟಿ ತಂಡದ ಧರ್ಮರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

-ಚಂದ್ರಮೋಹನ್