ಸೋಮವಾರಪೇಟೆ,ಜೂ. ೧೧ : ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಗ್ರಾಮದ ಮುಖ್ಯರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಗಿದೆ.

ಮುಖ್ಯ ರಸ್ತೆಯ ಎರಡೂ ಬದಿಯಲ್ಲಿರುವ ತೋಟ ಮಾಲೀಕರುಗಳು ತಮ್ಮ ತೋಟದ ಬೇಲಿಯ ಹೊರ ಭಾಗದಲ್ಲಿ ಮಣ್ಣು ಸುರಿದು ಮಳೆ ನೀರು ಒಳ ಬಾರದಂತೆ ತಡೆಯೊಡ್ಡಿರುವ ಹಿನ್ನೆಲೆ, ಮಳೆ ನೀರು ರಸ್ತೆಯ ಮೇಲೆಯೇ ನಿಂತು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಾನಗಲ್ಲು ಶ್ರೀ ಗಣಪತಿ ದೇವಾಲಯದಿಂದ ಗ್ರಾಮದ ಕೆರೆವರೆಗಿನ ರಸ್ತೆಯಲ್ಲಿ ಈ ಕೃತಕ ಕೆರೆ ನಿರ್ಮಾಣವಾಗಿದೆ. ಕೆರೆಯಿಂದ ಪಟ್ಟಣಕ್ಕೆ ಆಗಮಿಸುವ ರಸ್ತೆಯಲ್ಲಿಯೇ ಮಳೆಯ ನೀರು ಸಂಗ್ರಹವಾಗಿದ್ದು, ಸ್ಥಳೀಯರು ಹರಸಾಹಸಪಟ್ಟು ತೆರಳಬೇಕಿದೆ.

ಇನ್ನು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸಂಕಷ್ಟ ಹೇಳತ್ತೀರದ್ದಾಗಿದೆ. ಈ ಸ್ಥಳದಲ್ಲಿ ನಡೆದಾಡುವ ಸಂದರ್ಭ ಅಕ್ಷರಶಃ ಸರ್ಕಸ್ ಮಾಡುವಂತಾಗಿದೆ. ವಾಹನಗಳು ಸಂಚರಿಸುವ ಸಮಯದಲ್ಲಿ ಕೆಸರಿನ ಸಿಂಚನ ಮಾಮೂಲಾಗಿದೆ. ಎರಡೂ ಬದಿಯ ತೋಟ ಮಾಲೀಕರುಗಳು ರಸ್ತೆಗಿಂತ ಮೇಲ್ಮಟ್ಟದಲ್ಲಿ ಮಣ್ಣು ಸುರಿದಿರುವುದರಿಂದ ಕೆಸರಿನ ನೀರು ರಸ್ತೆಯಲ್ಲಿ ಸಂಗ್ರಹವಾಗಿದೆ. ಲೋಕೋಪಯೋಗಿ ಇಲಾಖೆ ತಕ್ಷಣ ಈ ಬಗ್ಗೆ ಗಮನಹರಿಸಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.