ಕೂಡಿಗೆ, ಜೂ. ೧೦: ಕಳೆದ ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕಾವೇರಿ ನೀರಾವರಿ ನಿಗಮದ ಮೂಲಕ ಹಾರಂಗಿ - ಕುಶಾಲನಗರ ರಸ್ತೆಯ ಅಗಲೀಕರಣ ಮತ್ತು ನೂತನ ಕಿರು ಸೇತುವೆ, ಡಾಂಬರಿಕರಣ ಸೇರಿದಂತೆ ರಸ್ತೆ ಕಾಮಗಾರಿಗೆ ರೂ. ೧೦ ಕೋಟಿ ಮೊತ್ತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದು ಶೇ. ೯೫ ರಷ್ಟು ರಸ್ತೆಯ ಕಾಮಗಾರಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಾಕಿ ಉಳಿದ ಸೇತುವೆ ಕಾಮಗಾರಿಗೆ ಇಲಾಖೆಯ ಪ್ರಸ್ತಾವನೆ ಅಧಾರದ ಮೇಲೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ಪ್ರಯತ್ನದಿಂದ ಹೆಚ್ಚುವರಿಯಾಗಿ ಒಂದು ಕೋಟಿ ಹಣ ಬಿಡುಗಡೆಯ ಅನುಮೋದನೆ ದೊರೆತಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಬಾಕಿ ಉಳಿದ ಹಾರಂಗಿ- ಕುಶಾಲನಗರ ಮುಖ್ಯ ರಸ್ತೆಯ ಹಾರಂಗಿ ಅಣೆಕಟ್ಟೆಯ ಮುಂಭಾಗದಿAದ ಮುನ್ನೂರು ಅಡಿಗಳಷ್ಟು ಅಂತರದಲ್ಲಿರುವ ಮುಖ್ಯ ರಸ್ತೆಗೆ ನೂತನವಾಗಿ ಸೇತುವೆ ನಿರ್ಮಾಣ, ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಬೃಹತ್ ಗಾತ್ರದ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಸರಕಾರದ ಸೂಚನೆ ಅನ್ವಯ ಮತ್ತು ಶಾಸಕರ ಆದೇಶದಂತೆ ನೀರಾವರಿ ಇಲಾಖೆಯ ಮೂಲಕ ಹಣ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.