ಸೋಮವಾರಪೇಟೆ, ಜೂ. ೧೨: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರ್ಲಕ್ಷö್ಯ, ನಿಯಮ ಪಾಲನೆ ಮಾಡದೇ ಇರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳನ್ನು ಎದುರಿಸುತ್ತಿರುವ ಸಿಬ್ಬಂದಿಗಳನ್ನು ಬೇರೆಡೆಗೆ ಕಳುಹಿಸಿ ಎಂದು ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್. ಪವನ್‌ಕುಮಾರ್ ಅವರು ನಿರ್ದೇಶನ ನೀಡಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತದಿಂದ ಆಯೋಜಿಸಿದ್ದ ಸಾರ್ವಜನಿಕ ದೂರು ಸ್ವೀಕಾರ ಹಾಗೂ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ಡಿವೈಎಸ್‌ಪಿ ಪವನ್‌ಕುಮಾರ್ ಅವರು, ಕಚೇರಿ ಕೆಲಸಕ್ಕೆ ಸಂಬAಧಿಸಿದAತೆ ಆರೋಪಗಳನ್ನು ಎದುರಿಸುತ್ತಿರುವ ಸಿಬ್ಬಂದಿಗಳನ್ನು ಬೇರೆಡೆಗೆ ಕಳುಹಿಸಿ ಎಂದು ತಾಲೂಕು ತಹಶೀಲ್ದಾರ್ ನವೀನ್‌ಕುಮಾರ್ ಅವರಿಗೆ ಸೂಚಿಸಿದರು.

ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿರುವ ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಹಲವಷ್ಟು ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು. ಜಾಗಕ್ಕೆ ಸಂಬAಧಿಸಿದ ಕಡತಗಳ ವಿಲೇವಾರಿ, ಫಾರಂ ೫೭ರಲ್ಲಿ ಸಲ್ಲಿಕೆಯಾದ ಅರ್ಜಿಗಳು, ನಡೆದಾಡಲು ರಸ್ತೆ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಕೊಡ್ಲಿಪೇಟೆ ಭಾಗದ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಇಟ್ಟಿಗೆ ತಯಾರಿಕೆಯು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ನದಿಯ ಆಸುಪಾಸಿನಲ್ಲಿ ಯಥೇಚ್ಛವಾಗಿ ಮಣ್ಣು ತೆಗೆಯಲಾಗುತ್ತಿದೆ. ಒಂದು ಬಾರಿಗೆ ೧೦ ಲಕ್ಷಕ್ಕೂ ಅಧಿಕ ಇಟ್ಟಿಗೆಯನ್ನು ಬೇಯಿಸಲಾಗುತ್ತಿದೆ. ಇದಕ್ಕೆ ನೂರಾರು ಲೋಡ್ ಮರಗಳನ್ನು ಸೌದೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಕಣ್ಣಿಗೆ ಕಾಣುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅದೇ ರೈತರು ಶುಂಠಿ ಸೇರಿದಂತೆ ಇನ್ನಿತರ ಕೃಷಿಗೆ ತಮ್ಮ ಜಾಗದಲ್ಲಿರುವ ಮರಗಳನ್ನು ಕಡಿದರೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಕೊಡ್ಲಿಪೇಟೆಯ ತೇಜಕುಮಾರ್ ಆರೋಪಿಸಿದರು.

ಇದರೊಂದಿಗೆ ರಾತ್ರಿ ವೇಳೆಯಲ್ಲಿ ದಂಧೆ ನಡೆಯುತ್ತಿದೆ. ರಾತ್ರಿ ೧೦ ಗಂಟೆಯಿAದ ಬೆಳಿಗ್ಗೆ ೪ ಗಂಟೆಯವರೆಗೆ ಹೊಳೆ ಬದಿಯಿಂದ ಮಣ್ಣು ತೆಗೆಯಲಾಗುತ್ತಿದೆ. ಬೆಳಗ್ಗಿನ ಜಾವ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲುಗಳನ್ನು ಬ್ಲಾಸ್ಟ್ ಮಾಡಲಾಗುತ್ತಿದೆ. ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಇಲಾಖೆಗಳು ಕೈಕಟ್ಟಿ ಕುಳಿತಿವೆ ಎಂದು ದೂರಿದರು.

ಇಟ್ಟಿಗೆ ಕಾರ್ಖಾನೆಗೆ ಹೊರ ಭಾಗದಿಂದ ಸೌದೆಗಳನ್ನು ತರಲಾಗುತ್ತಿದೆ. ಮರದ ಕೊಂಬೆಗಳನ್ನು ಕಡಿದರೆ ಎಫ್‌ಐಆರ್ ಮಾಡಲು ಅವಕಾಶವಿಲ್ಲ. ಬುಡ ಸಹಿತ ಮರ ಕಡಿದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದರು.

ಕೊಡ್ಲಿಪೇಟೆ ಭಾಗದಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ವಿಸ್ತೃತ ದೂರು ಸಲ್ಲಿಸಿ, ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಅವರು ದೂರುದಾರರಿಗೆ ತಿಳಿಸಿದರು.

ಫಾರಂ ೫೭ರಲ್ಲಿ ಅರ್ಜಿ ಸಲ್ಲಿಸಿ ೪ ವರ್ಷ ಕಳೆದಿದೆ. ಅಕ್ರಮ ಸಕ್ರಮ ಸಮಿತಿಯ ಸಭೆಯಲ್ಲೂ ವಿಲೇವಾರಿಯಾಗಿದೆ. ನಮ್ಮೊಂದಿಗೆ ಅರ್ಜಿ ಸಲ್ಲಿಸಿದ ಇತರರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ ನಮಗೆ ಮಾತ್ರ ಈವರೆಗೆ ಸಾಗುವಳಿ ಚೀಟಿ ನೀಡಿಲ್ಲ ಎಂದು ಕೊಡ್ಲಿಪೇಟೆ ಊರುಗುತ್ತಿ ಗ್ರಾಮದ ಹೇಮಕುಮಾರ್ ದೂರು ಸಲ್ಲಿಸಿದರು.

ಗದ್ದೆಗೆ ತೆರಳುವ ದಾರಿಗೆ ಸ್ಥಳೀಯರೋರ್ವರು ತಡೆಯೊಡ್ಡಿದ್ದಾರೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರವಾಗಿ ಬಂದಿದೆ. ಆದರೂ ಸಹ ನಮಗೆ ದಾರಿ ನೀಡಿಲ್ಲ. ಕೇಳಲು ಹೋದರೆ ಹಲ್ಲೆ, ಬೆದರಿಕೆಯೊಡ್ಡುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಲ್ತರೆಶೆಟ್ಟಳ್ಳಿಯ ಗುರಪ್ಪ ದೂರಿದರು.

ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಅವರಿಗೆ ಡಿವೈಎಸ್‌ಪಿ ಸೂಚಿಸಿದರು. ಠಾಣೆಗಳಲ್ಲಿ ದೂರು ಸಲ್ಲಿಕೆಯಾದ ತಕ್ಷಣ ಎದುರುದಾರರನ್ನು ಕರೆಸಿ ವಿಚಾರಣೆ ನಡೆಸಬೇಕು. ದೂರುಗಳನ್ನು ಸುಮ್ಮನೆ ಇಟ್ಟುಕೊಂಡು ಕಾಲಹರಣ ಮಾಡಬಾರದು. ದೂರುದಾರರು ಹಾಗೂ ಎದುರುದಾರರನ್ನು ಕರೆಸಿ ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಸಭೆಯಲ್ಲಿ ೭ ಮಂದಿ ತಮ್ಮ ದೂರುಗಳನ್ನು ಸಲ್ಲಿಸಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ, ಲಂಚಕ್ಕೆ ಬೇಡಿಕೆ ಸೇರಿದಂತೆ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರುಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ೦೮೨೭೨ ೨೯೫೨೯೭ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪವನ್‌ಕುಮಾರ್ ತಿಳಿಸಿದರು.

ಈ ಸಂದರ್ಭ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್, ತಹಶೀಲ್ದಾರ್ ನವೀನ್‌ಕುಮಾರ್ ಸೇರಿದಂತೆ ಸರ್ವೆ, ಕಂದಾಯ, ತೋಟಗಾರಿಕೆ, ಲೋಕೋಪಯೋಗಿ, ಜಿ.ಪಂ. ಇಂಜಿನಿಯರಿAಗ್, ಪ.ಪಂ., ಅಬಕಾರಿ ಇಲಾಖೆ, ಅರಣ್ಯ ಸೇರಿದಂತೆ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.