ಕಣಿವೆ, ಜೂ. ೧೨: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹಾಗೂ ಪಿಡಿಓ ಇಬ್ಬರ ದುರ್ವರ್ತನೆಯಿಂದಾಗಿ ಪಂಚಾಯಿತಿಯ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬುಧವಾರ ನಡೆದ ಪಂಚಾಯಿತಿ ಸದಸ್ಯರ ವಿಶೇಷ ಸಭೆಯಲ್ಲಿ ಸರ್ವ ಸದಸ್ಯರು ನಿರ್ಣಯ ಕೈಗೊಂಡರು.

೧೪ ಸದಸ್ಯ ಬಲದ ಪಂಚಾಯಿತಿಯಲ್ಲಿ ಅರುಣಕುಮಾರಿ ಅಧ್ಯಕ್ಷರಾಗಿಯೂ, ಲತಾ ಎಂಬವರು ಉಪಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದು, ಸಕಾಲದಲ್ಲಿ ಯಾವೊಂದು ಸಭೆ ಕರೆಯದೇ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡದೇ ಸಾರ್ವಜನಿಕವಾಗಿ ಪಂಚಾಯಿತಿಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿದ ೧೦ ಮಂದಿ ಸದಸ್ಯರು ಪಂಚಾಯಿತಿಯ ನಾಲ್ಕನೇ ವಾರ್ಡಿನ ಮರೂರು ಮಹದೇವ ಅವರನ್ನು ಸಭಾ ನಾಯಕರಾಗಿ ನೇಮಕ ಮಾಡಿಕೊಂಡು ಬುಧವಾರ ವಿಶೇಷ ಸಭೆ ನಡೆಸಿದರು.

ಪಂಚಾಯಿತಿಯ ಬೇರೆ ಬೇರೆ ಹೆಡ್‌ಗಳಲ್ಲಿ ಸುಮಾರು ೨೫ ಲಕ್ಷ ರೂ.ಗಳಿಗೂ ಹೆಚ್ಚು ಹಣ ಇದ್ದರೂ ಕೂಡ, ಬಾಕಿ ಇದ್ದ ವಿದ್ಯುತ್ ಬಿಲ್ ಪಾವತಿಸದ ಕಾರಣ ಚೆಸ್ಕಾಂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದೆ.

ಪಂಚಾಯಿತಿ ಅಧ್ಯಕ್ಷೆ ಸರ್ವಾಧಿಕಾರಿ ಧೋರಣೆ ತಳೆದಿದ್ದು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಂಚಾಯಿತಿಯಲ್ಲಿ ಈ ಹಿಂದೆ ಇದ್ದ ಪಿಡಿಓ ಅವರನ್ನು ವರ್ಗಾವಣೆಗೊಳಿಸಿದ್ದು ಸರಿಯಲ್ಲ.

ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿಗಳು ನಡೆಯದ ಕಾರಣ ಜನರು ಪಂಚಾಯಿತಿ ವ್ಯವಸ್ಥೆ ವಿರುದ್ದ ಸಿಡಿದೇಳುವಂತಾಗಿದ್ದು, ಎಲ್ಲಾ ಸದಸ್ಯರನ್ನು ಅನುಮಾನ ಹಾಗೂ ಅಗೌರವಗಳಿಂದ ಕಾಣುವಂತಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸದಸ್ಯರುಗಳು, ಕೂಡಲೇ ಹಾಲಿ ಅಧ್ಯಕ್ಷರು ಹಾಗೂ ವರ್ಗಾವಣೆಗೊಂಡು ತೆರಳಿರುವ ಪಿಡಿಒ ಸಮ್ಮುಖದಲ್ಲಿ ಸಾರ್ವಜನಿಕ ಸಭೆ ನಡೆಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಒತ್ತಾಯಿಸಿದರು.

ಪಂಚಾಯಿತಿಯಲ್ಲಿ ಖಾಯಂ ಪಿಡಿಓ ನೇಮಕಕ್ಕೂ ಮೊದಲು, ಈ ಹಿಂದೆ ಇದ್ದ ಪಿಡಿಓ ಅವರನ್ನು ಕರೆದು ಪಂಚಾಯಿತಿಯ ಲೆಕ್ಕ ಪತ್ರ ಸಭೆ ನಡೆಸಬೇಕು.

ಹಾಲಿ ಅಧ್ಯಕ್ಷರು ಸಭೆ ನಡೆಸದ ಕಾರಣ ಪಂಚಾಯತ್‌ರಾಜ್ ಕಾಯಿದೆಯ ಅನುಸಾರವೇ ನಾವುಗಳು ಬಹುಮತದ ಸಭೆ ಕರೆದು ನಮ್ಮಲ್ಲೇ ಓರ್ವ ಸದಸ್ಯರನ್ನು ಸಭಾನಾಯಕರಾಗಿ ನೇಮಿಸಿ ನಿರ್ಣಯ ಕೈಗೊಂಡಿದ್ದೇವೆ ಎಂದು ಹಾಲಿ ಸದಸ್ಯರೂ ಆದ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಮಧುಸೂದನ್ ‘ಶಕ್ತಿ’ ಗೆ ವಿವರಿಸಿದರು.

ಸಭೆಯಲ್ಲಿ ಒಟ್ಟು ಹತ್ತು ಮಂದಿ ಸದಸ್ಯರು ಹಾಗೂ ಪಂಚಾಯಿತಿ ಕಾರ್ಯದರ್ಶಿ ಸುರೇಶ್ ಇದ್ದರು.