ಗೋಣಿಕೊಪ್ಪಲು, ಜೂ. ೧೨: ಗೋಣಿಕೊಪ್ಪ ನಗರವು ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಇದೀಗ ಕೆಲವು ಸಮಯದಿಂದ ನಗರದಲ್ಲಿ ಟ್ರಾಫಿಕ್ ವಿಚಾರವನ್ನು ಮುಂದಿಟ್ಟುಕೊAಡು ಪ್ರತಿನಿತ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮದಲ್ಲಿ ಟ್ರಾಫಿಕ್ ವಿಚಾರವೇ ಚರ್ಚೆಗೆ ಗ್ರಾಸವಾಗುತ್ತಿವೆ. ಗೋಣಿಕೊಪ್ಪ ನಗರಕ್ಕೆ ಪ್ರವಾಸಿಗರು ಸೇರಿದಂತೆ ಇತರರು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಗರದ ಗೌರವ ಉಳಿಸುವ ಜವಾಬ್ದಾರಿ ಇಲ್ಲಿನ ನಾಗರಿಕರ ಮೇಲಿದೆ, ಆ ನಿಟ್ಟಿನಲ್ಲಿ ಬಸ್ ಮಾಲೀಕರು,ಚಾಲಕರು,ಏಜೆಂಟರುಗಳು ತಮ್ಮ ಕರ್ತವ್ಯ ಪಾಲನೆ ಮಾಡಬೇಕು. ಇದರೊಂದಿಗೆ ಪೊಲೀಸ್ ಇಲಾಖೆಯ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕೆಂದು ವೀರಾಜಪೇಟೆ ತಾಲೂಕು ಡಿವೈಎಸ್ಪಿ ಮೋಹನ್ ಕುಮಾರ್ ಸೂಚನೆ ನೀಡಿದರು.
ಗೋಣಿಕೊಪ್ಪಲುವಿನಲ್ಲಿ ಅದರಲ್ಲೂ ವಿಶೇಷವಾಗಿ ನಿಲ್ದಾಣದಲ್ಲಿ ಖಾಸಗಿ ಬಸ್ಗಳು ಅಡ್ಡಾದಿಡ್ಡಿ ನಿಲುಗಡೆಗೊಳ್ಳುತ್ತಿರುವುದರಿಂದ ಸಮಸ್ಯೆಯು ಗಂಭೀರ ಮಟ್ಟಕ್ಕೆ ತಲುಪುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇಲಾಖೆಯ ನಿರ್ಧಾರಕ್ಕೆ ಸಹಕರಿಸುವ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ತಹಬದಿಗೆ ತರಬೇಕು. ನಾಗರಿಕರ ಸಂಚಾರಕ್ಕೂ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಗೋಣಿಕೊಪ್ಪಲುವಿನ ಕಾಮತ್ ನವಮಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ನಗರದ ಖಾಸಗಿ ಬಸ್ ಮಾಲೀಕರ ಚಾಲಕರ ಹಾಗೂ ಏಜೆಂಟರುಗಳ ಸಭೆಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪ ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನದಿಂದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವ ಬಸ್ಗಳ ಸಮಯವನ್ನು ಅರ್ಧ ಗಂಟೆಗೆ ಸೀಮಿತಗೊಳಿಸಲಾಗಿದೆ. ವೀರಾಜಪೇಟೆಗೆ ತೆರಳುವ ಬಸ್ಗಳು ಕೇವಲ ೫ ನಿಮಿಷದ ಮಟ್ಟಿಗೆ ರಸ್ತೆಯ ಎಡ ಭಾಗದಲ್ಲಿ ಇತರ ವಾಹನಗಳಿಗೆ ತೊಂದರೆ ಆಗದ ರೀತಿಯಲ್ಲಿ ನಿಲ್ಲಿಸಿ ನಂತರ ಹೊರಡಬೇಕು. ಒಂದರ ಹಿಂದೆ ಒಂದು ಬಸ್ಸನ್ನು ನಿಲ್ಲಿಸುವ ಅವಕಾಶವಿರುವುದಿಲ್ಲ. ಪೊನ್ನಂಪೇಟೆ ಜಂಕ್ಷನ್ನಲ್ಲಿ ಬಸ್ ನಿಲುಗಡೆ ನಿಷೇಧಿಸಲಾಗಿದೆ. ಬದಲಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸ್ಥಳವನ್ನು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಸ್ ನಿಲ್ದಾಣದಿಂದ ಹೊರಡುವ ಬಸ್ಗಳು ಪಟ್ಟಣದ ಎರಡು ಭಾಗದಲ್ಲಿಯೂ ಎಲ್ಲೆಂದರಲ್ಲಿ ನಿಲ್ಲಿಸುವುದನ್ನು ನಿಷೇಧಿಸಲಾಗಿದ್ದು, ನಿಲ್ದಾಣದಿಂದ ಪೊನ್ನಂಪೇಟೆೆ ಮಾರ್ಗವಾಗಿ ತೆರಳುವ ಬಸ್ಗಳು ಮಮತ ಥಿಯೇಟರ್ ಮುಂಭಾಗ ನಿಲುಗಡೆಗೆ ಅವಕಾಶವಿದೆ. ನಂತರ ಪೊನ್ನಂಪೇಟೆ ರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿಯೇ ನಿಲುಗಡೆಗೊಳಿಸಬೇಕು. ವೀರಾಜಪೇಟೆಗೆ ತೆರಳುವ ಬಸ್ಗಳು ನಿಲ್ದಾಣದಿಂದ ಹೊರಟು ಐಪಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳಬೇಕು. ನಿಗದಿತ ಸಮಯದಲ್ಲಿ ಮಾತ್ರ ಬಸ್ಗಳು ನಿಲ್ದಾಣ ಪ್ರವೇಶ ಮಾಡಬೇಕು ಎಂಬುದಾಗಿ ಇಲಾಖೆಯ ಮಾರ್ಗಸೂಚಿಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಮಾತನಾಡಿದ ಬಸ್ ಮಾಲೀಕರುಗಳಾದ ಕಳ್ಳಿಚಂಡ ಧನು, ದಿಲನ್ ಚಂಗಪ್ಪ ಹಾಗೂ ಇತರರು ಕೆಲ ತಿಂಗಳಿನಿAದ ನಿಲ್ದಾಣದಲ್ಲಿ ಬಸ್ಗಳ ನಿಲುಗಡೆ ವಿಚಾರದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ. ಇನ್ನು ಮುಂದೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ನಿಲ್ದಾಣದಲ್ಲಿ ೨ ಭಾಗದಲ್ಲಿಯೂ ೫೦ ಮೀಟರ್ ತನಕ ಯಾವುದೇ ವಾಹನ ನಿಲುಗಡೆಗೆ ಅವಕಾಶ ನೀಡಬಾರದು, ಪೊನ್ನಂಪೇಟೆ ರಸ್ತೆ ಬದಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣವನ್ನು ನಿರ್ಮಾಣ ಮಾಡಬೇಕು. ಇಲಾಖೆಯ ನಿಯಮಗಳನ್ನು ಬಸ್ ಮಾಲೀಕರು ಹಾಗೂ ಚಾಲಕರು ಪಾಲಿಸಲಿದ್ದೇವೆ. ಇಲಾಖೆ ಕೂಡ ಇಲ್ಲಿ ತನಕ ಉತ್ತಮ ಸ್ಪಂದನ ನೀಡಿದೆ. ಟ್ರಾಫಿಕ್ ವಿಚಾರದಲ್ಲಿ ಇಲಾಖೆಯ ನಿಯಮಗಳನ್ನು ಪಾಲಿಸುತ್ತೇವೆ ಎಂದು ಅಧಿಕಾರಿಗಳ ಮಾತಿಗೆ ಉತ್ತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ಬಸ್ ನಿಲ್ದಾಣದ ಕಾಮಗಾರಿ ಮುಂದುವರೆಯುತ್ತಿದ್ದು ಬಸ್ಗಳ ನಿಲುಗಡೆಗೆ ಜಾಗ ಇಲ್ಲದಂತಾಗಿದೆ. ನಾಲ್ಕು ತಿಂಗಳೊಳಗೆ ಸಮಸ್ಯೆಗೆ ಪರಿಹಾರ ಲಬಿಸಲಿದೆ. ಪೊನ್ನಂಪೇಟೆ ರಸ್ತೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಾಣ ಸದ್ಯದಲ್ಲಿಯೇ ಮಾಡಲಾಗುವುದು. ಪೊನ್ನಂಪೇಟೆ ಜಂಕ್ಷನ್ನಲ್ಲಿ ಆಗುವ ಟ್ರಾಫಿಕ್ ಸಮಸ್ಯೆಯನ್ನು ನೀಗಿಸಬೇಕು. ಎಲ್ಲೆಂದರಲ್ಲಿ ಪ್ರಯಾಣಿಕರು ಬಸ್ಗೆ ಹತ್ತುವುದನ್ನು ನಿಲ್ಲಿಸಬೇಕು. ನಿಗದಿತ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಬಸ್ಗಳು ನಿಲುಗಡೆ ಮಾಡಬೇಕು ಎಂದು ಸಭೆಗೆ ಉತ್ತರಿಸಿದರು.
ಸಭೆಯಲ್ಲಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಪಿ. ರಾಜ ಮಾತನಾಡಿ ಪೊಲೀಸರು ಸಣ್ಣ ಪುಟ್ಟ ವಿಚಾರಗಳಿಗೆ ದಂಡ ವಿಧಿಸುವುದನ್ನು ಕಡಿಮೆ ಮಾಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಡೀಸೆಲ್ ಬೆಲೆ ಸೇರಿದಂತೆ ಇನ್ನಿತರ ಬಿಡಿ ಭಾಗಗಳ ಬೆಲೆ ಹೆಚ್ಚಾಗಿದೆ. ಇಲಾಖೆಯು ದಂಡ ವಿಧಿಸುವುದರಿಂದ ಸಮಸ್ಯೆಯಾಗುತ್ತಿದೆ. ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ನಿಲ್ದಾಣದಲ್ಲಿ ಆಟೋ ರಿಕ್ಷಾಗಳ ಅಡ್ಡಾದಿಡ್ಡಿ ಓಡಾಟದಿಂದ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ರೂಪದೇವಿ ಬಿರಾದಾರ್ ಮಾತನಾಡಿ, ಕೆಲವು ಸಮಯದ ಹಿಂದೆ ಬಸ್ಗಳ ಸಮಸ್ಯೆಯಿಂದಾಗಿ ಇಡೀ ಠಾಣೆಯ ಸಿಬ್ಬಂದಿಗಳು ನಿಲ್ದಾಣಕ್ಕೆ ಬರುವಂತಾಗಿತ್ತು. ಆ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆಗೆ ಬಸ್ಗಳು ಕಾರಣವಾದವು. ನಂತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಸ್ ಮಾಲೀಕರ ಸಭೆಯನ್ನು ಆಯೋಜಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು, ಎಲ್ಲರಿಗೂ ಸಮಸ್ಯೆ ಅರಿವಾಗಿದೆ. ನಗರದಲ್ಲಿ ಕೆಲವು ಆಟೋ ರಿಕ್ಷಾಗಳು ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಲಭ್ಯವಿದ್ದು, ಇವುಗಳಿಗೆ ಕಡಿವಾಣ ಹಾಕಲಾಗುವುದು. ಇಲಾಖೆಯ ನಿಯಮಗಳಿಗೆ ಎಲ್ಲರೂ ಬದ್ದರಾಗಿರುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಚಿಣ್ಣಪ್ಪ, ಬಸ್ ಮಾಲೀಕ ಕಾಡ್ಯಮಾಡ ಪೂಣಚ್ಚ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್, ವಿವಿಧ ಖಾಸಗಿ ಬಸ್ಗಳ ಮಾಲೀಕರು, ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯ ಶರತ್ಕಾಂತ್ ಸೇರಿದಂತೆ ಬಸ್ ಏಜೆಂಟರುಗಳು ಭಾಗವಹಿಸಿದ್ದರು.