- ಅನಿಲ್ ಎಚ್.ಟಿ.
ಚಿತ್ರಮಂದಿರದ ಕತ್ತಲಕೂಪದಲ್ಲಿ ಬಿಳಿ ತೆರೆಯ ಮೇಲೆ ನಾಯಕ ನಟ ಮದ್ಯಪಾನ ಮಾಡಿದವರ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಎಂಥ ಆದರ್ಶ ಎಂದು ಮೆಚ್ಚುಗೆ ಸೂಸುವ ಮನಸ್ಸಿಗೆ ಅದೇ ನಾಯಕ ನಿಜ ಜೀವನದಲ್ಲಿ ಮದ್ಯವ್ಯಸನಿ, ಗಂಟೆಗಟ್ಟಲೆ ಮದ್ಯಪಾನ ಮಾಡಿ ತೇಲುತ್ತಿರುತ್ತಾನೆ ಎಂಬ ಸತ್ಯ ತಿಳಿದಾಗ ಏನಾಗಬೇಡ?
ಹಣ ವಂಚಿಸಿದ ಎಂಬ ಕಾರಣಕ್ಕಾಗಿ ತಪ್ಪಿತಸ್ಥನ ವಿರುದ್ಧ ಹೋರಾಟ ನಡೆಸಿ ತೆರೆ ಮೇಲೆ ಗೆಲುವು ಸಾಧಿಸುವ ಹೀರೋ ಕಂಡು ವಾವ್ ಜನರ ನಾಯಕ ಎಂದರೆ ಹೀಗಿರಬೇಕು ಎಂದು ಭಾವಿಸುವ ಪ್ರೇಕ್ಷಕನಿಗೆ ಅದೇ ನಾಯಕ ನಟ ನಿಜ ಜೀವನದಲ್ಲಿ ಅದೆಷ್ಟೋ ಮಂದಿಗೆ ಕೋಟಿಗಟ್ಟಲೆ ಮೋಸ ಮಾಡಿ ಕಂಡವರ ಮನೆ ಹಾಳು ಮಾಡಿದ್ದಾನೆ ಎಂದು ತಿಳಿದಾಗ ಏನನ್ನಿಸಬಹುದು?
ತಪ್ಪು ಮಾಡಿದ ದುರುಳರನ್ನು ಅಟ್ಟಾಡಿಸಿ ಕಂಡಕAಡಲ್ಲೆಲ್ಲಾ ಹೊಡೆದು, ಒದ್ದು, ಆಯುಧಗಳಿಂದ ಹಲ್ಲೆ ಮಾಡಿ ಇನ್ನು ಮುಂದೆ ತಪ್ಪು ಮಾಡಿದರೆ ಸುಮ್ಮನಿರುವುದಿಲ್ಲ ಎಂದು ತೆರೆ ಮೇಲೆ ಹೀರೋ ಅಬ್ಬರಿಸಿದಾಗ ಚಪ್ಪಾಳೆ ಹೊಡೆದು ನೀನೇ ಕಣೋ ನನ್ನ ಹೀರೋ ಎಂದು ಮೆಚ್ಚಿದವರಿಗೆ ಅದೇ ಹೀರೋ ತನ್ನ ಪ್ರಿಯತಮೆಗಾಗಿ ವ್ಯಕ್ತಿಯೋರ್ವನನ್ನು ಬಂಧಿಸಿ, ಹಿಂಸಿಸಿ, ಮನಬಂದAತೆ ಹೊಡೆದು ಕೊಂದು ಹಾಕಿದ ಎಂದಾಗ ಎಂಥ ಭಾವನೆ ಬಂದೀತು?
ಕತ್ತಲಲ್ಲಿ ಮೂಡುವ ರಂಗುರAಗಿನ ಸಿನಿಮಾಕ್ಕೂ ಹಗಲು ಬೆಳಕಿನಲ್ಲಿ ಸಂಭವಿಸುವ ಘಟನೆಗಳ ನೈಜತೆಗೂ ವ್ಯತ್ಯಾಸವಿದೆ ಸಿನಿಮಾದಲ್ಲಿ ಹೀರೋ ಆದವನು ನಿಜ ಜೀವನದಲ್ಲಿ ವಿಲನ್ ಎನಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ, ಸಿನಿಮಾದಲ್ಲಿ ಪೊಲೀಸರು ಕೊನೆಗೆ ಬರುತ್ತಾರೆ, ನಿಜ ಜೀವನದಲ್ಲಿ ಬೇಗನೇ ಬರುತ್ತಾರೆ, ಶುಭಂ ಎಂಬಲ್ಲಿಗೆ ಸಿನಿಮಾ ಅಂತ್ಯವಾಗುತ್ತದೆ, ಬ್ರೇಕಿಂಗ್ ನ್ಯೂಸ್‌ನಿಂದ ನಿಜ ಜೀವನದ ಕಥನ ಪ್ರಾರಂಭವಾಗುತ್ತದೆ,
ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ಸುದೀಪ್, ಯಶ್ ಜೊತೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಾಯಕ ಎಂದರೆ ಅದು ದರ್ಶನ್.
ಕಳೆದ ವರ್ಷ ತೆರೆ ಕಂಡ ದರ್ಶನ್ ನಾಯಕನಾಗಿದ್ದ ಕಾಟೇರ ೫ ವರ್ಷಗಳಲ್ಲಿ ಅತ್ಯಧಿಕ ಹಣ ಸಂಗ್ರಹಿಸಿದ ಮೂರು ಚಿತ್ರಗಳ ಪೈಕಿ ಒಂದು ಎಂಬ ದಾಖಲೆ ಮಾಡಿತ್ತು, ಫೈಟ್ ದೃಶ್ಯಗಳಲ್ಲಿ, ಹಾಡಿನ ಸನ್ನಿವೇಶಗಳಲ್ಲಿ, ಭಾವನಾತ್ಮಕ ಪಾತ್ರಗಳಲ್ಲಿ ಬಹಳ ಚೆನ್ನಾಗಿ ನಟಿಸುತ್ತಾನೆ ಎಂದು ದರ್ಶನ್‌ಗೆ ಅಪಾರ ಮಹಿಳಾ ಅಭಿಮಾನಿಗಳಿದ್ದರು, ಪಡ್ಡೆ ಹುಡುಗರಂತೂ ದರ್ಶನ್ ಎಂದರೆ ಸಾಕು ತಮ್ಮ ಆರಾಧ್ಯ ದೈವ ಎಂದೇ ಭಾವಿಸಿದ್ದಾರೆ. ಚಿತ್ರರಂಗಕ್ಕೆ ಬಂದು ೨೩ ವರ್ಷಗಳಲ್ಲಿ ೭೫ ಸಿನಿಮಾಗಳಲ್ಲಿ ದರ್ಶನ್ ನಾಯಕರಾಗಿ ನಟಿಸಿದ್ದಾರೆ.
ಇಂಥಾ ವಿಶೇಷತೆಗಳನ್ನು ಹೊಂದಿದ ದರ್ಶನ್ ಸಿನಿಮಾ ತೆರೆಯಲ್ಲಿ ಮಾತ್ರ ಹೀರೋವಾಗಿ ವಿಜೃಂಭಿಸಿದನೇ ವಿನಃ ನಿಜವಾದ ಬದುಕಿನಲ್ಲಿ ಮಾತ್ರ ನಾಯಕನಾಗಿ ಕಂಗೊಳಿಸಲೇ ಇಲ್ಲ.
ವಿಪರ್ಯಾಸ ಗಮನಿಸಿ, ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಕನ್ನಡ ಸಿನಿಮಾ ರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ೩ ದಶಕಗಳ ಕಾಲ ವಿಜೃಂಭಿಸಿದವರು, ಗಹಿಗಹಿಸುತ್ತಾ ತೂಗುದೀಪ ಶ್ರೀನಿವಾಸ್ ಕೆಕ್ಕರಿಸಿ ನೋಡುವ ದೃಶ್ಯಗಳನ್ನು ವೀಕ್ಷಿಸಿದ ಅದೆಷ್ಟೋ ಮಂದಿ ಅದನ್ನು ನೆನಪಿಸಿಕೊಂಡು ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಿದ್ದರು, ಖಳನಾಯಕನಿಗೆ ಮತ್ತೊಂದು ಹೆಸರು ಎಂಬAತೆ ತೂಗುದೀಪ ಶ್ರೀನಿವಾಸ್ ಅಂಥ ಪಾತ್ರಗಳಲ್ಲಿ ಅಬ್ಬರಿಸಿದ್ದರು. ಆದರೆ ತೂಗುದೀಪ ಶ್ರೀನಿವಾಸ್ ಎಂದಿಗೂ ನಿಜ ಜೀವನದಲ್ಲಿ ಖಳನಂತೆ ವರ್ತಿಸಲೇ ಇಲ್ಲ. ಕೌಟುಂಬಿಕ ಜೀವನದಲ್ಲಿ ಮಾದರಿಯಾಗಿದ್ದ ಶ್ರೀನಿವಾಸ್ ಅದೆಷ್ಟೋ ಮಂದಿಗೆ ಕೈಲಾದ ಸಹಾಯ ಮಾಡುವ ಮೂಲಕ ಹೆಮ್ಮೆಗೆ ಪಾತ್ರರಾಗಿದ್ದರು. ಇವರ ಪತ್ನಿ ಮೀನಾ ಮೂಲತಃ ಕೊಡಗಿನ ಪೊನ್ನಂಪೇಟೆಯವರು ಎಂಬುದೂ ಗಮನಾರ್ಹ, ಆದರ್ಶ ಕುಟುಂಬಕ್ಕೆ ಸಾಕ್ಷಿಯಾಗಿ ಈ ಜೋಡಿ ಜೀವಿಸಿತ್ತು.
ತೂಗುದೀಪ ಶ್ರೀನಿವಾಸ್ ಮಗನಾದ ದರ್ಶನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೆಲವೇ ತಿಂಗಳಲ್ಲಿಯೇ ಮಾಸ್ ಹೀರೋ ಆಗಿ ಜನಮನ್ನಣೆ ಗಳಿಸಿದರು, ತೂಗುದೀಪ ಶ್ರೀನಿವಾಸ್ ಚಿತ್ರರಂಗದಲ್ಲಿ ಲಭಿಸುತ್ತಿದ್ದ ಅಲ್ಪ ಸಂಭಾವನೆಯಲ್ಲಿಯೇ ಬಹಳ ಕಷ್ಟಕರ ಜೀವನ ಮಾಡುತ್ತಿದ್ದರೆ ದರ್ಶನ್ ಕೆಲವೇ ಸಮಯದಲ್ಲಿ ಶ್ರೀಮಂತನಾದ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡ ತೊಡಗಿದ್ದ, ಹಣದ ಪ್ರಭಾವದಿಂದ ದರ್ಶನ್‌ಗೆ ಗೆಳೆಯರ ಬಳಗವೂ ದೊಡ್ಡದಾಯಿತು.
ಎಲ್ಲಾ ಗೆಳೆಯರೂ ಜೀವನಕ್ಕೆ ಸೂಕ್ತ ಮಾರ್ಗದರ್ಶಕರೇ ಆಗಬೇಕೆಂದಿಲ್ಲವಲ್ಲ, ಹೀಗಾಗಿಯೇ ಕೆಲವು ಗೆಳೆಯರು ದರ್ಶನ್ ದಾರಿ ತಪ್ಪಿಸಿದ್ದರು. ಪಾರ್ಟಿ, ಮೋಜು ಮಸ್ತಿಯೇ ಜೀವನ ಎಂಬAತೆ ದರ್ಶನ್ ಕಾಲ ಕಳೆಯ ತೊಡಗಿದ.
ಹೀಗಿದ್ದರೂ ಚಿತ್ರರಂಗದಲ್ಲಿ ಅದೃಷ್ಟ ಎಂಬುದು ದರ್ಶನ್ ಪರವಾಗಿಯೇ ಇತ್ತು. ಸಾಲು ಸಾಲು ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡವು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣದಂಥ ಚಿತ್ರ ಉತ್ತರ ಕರ್ನಾಟಕದ ಕ್ರಾಂತಿವೀರನನ್ನು ದರ್ಶನ್‌ನಲ್ಲಿಯೇ ಪ್ರೇಕ್ಷಕ ಕಾಣುವಷ್ಟರ ಮಟ್ಟಿಗೆ ಸೂಪರ್ ಹಿಟ್ ಆಯಿತು.
ಬಣ್ಣದ ಲೋಕ ಎಂದ ಮೇಲೆ ಬಣ್ಣಬಣ್ಣದ ಚಿಟ್ಟೆಗಳಿಗೂ ಕಡಮೆಯಿಲ್ಲ, ನಿಖಿತಾ ಎಂಬಾಕೆಯೊAದಿಗೆ ದರ್ಶನ್ ಸಂಬAಧದ ಬಗ್ಗೆ ಸುದ್ದಿ ಹಬ್ಬಿತು. ನಂತರ ದರ್ಶನ್ ಪತ್ನಿ ವಿಜಯಲಕ್ಷಿ ಪ್ರಕರಣ ನಿಭಾಯಿಸಿ ಗಂಡನ ಮರ್ಯಾದೆ ಕಾಪಾಡಿದ್ದಳು. ಇದಾಗೆ ಕೆಲವೇ ವರ್ಷಗಳಲ್ಲಿ ಪತ್ನಿ ವಿಜಯಲಕ್ಷಿö್ಮ ಮೇಲೇ ಹಲ್ಲೆ ಮಾಡಿದ ಆರೋಪದಡಿ ದರ್ಶನ್ ಜೈಲು ಪಾಲಾದ.
ವಿಪರ್ಯಾಸ ಎಂಬAತೆ ದರ್ಶನ್ ಜೈಲಿನಿಂದ ಬಿಡುಗಡೆಯಾದ ಮೇಲೆ ತೆರೆಕಂಡ ಸಿನಿಮಾ ತೋಪಾದೀತು ಎಂದೇ ಹಲವರು ಭಾವಿಸಿದ್ದರು, ಆದರೆ ಆನಂತರ ತೆರೆಕಂಡ ದರ್ಶನ್ ನಾಯಕನಾಗಿದ್ದ ಸಾರಥಿ ಎಂಬ ಸಿನಿಮಾ ಅದ್ಬುತ ಯಶಸ್ಸು ಗಳಿಸಿತ್ತು. ನಾಯಕನೋರ್ವನ ಜೈಲುವಾಸವೇ ಬೇರೇ, ಸಿನಿಮಾ ಲೈಫೇ ಬೇರೆ ಎಂದು ಕನ್ನಡಿಗರು ತೀರ್ಪು ನೀಡಿದ್ದರು, ಇದು ಸಹಜವಾಗಿಯೇ ದರ್ಶನ್‌ನಲ್ಲಿ ಅಹಂ ಬೆಳೆಯಲು ಕಾರಣವಾಯಿತು.
ಇದೇ ವೇಳೆಗೆ ಪರಿಚಯವಾದ ಮತ್ತೋರ್ವ ಅಭಿನೇತ್ರಿ ಪವಿತ್ರಗೌಡ ಜತೆ ದರ್ಶನ್ ನಿಕಟ ಸಂಪರ್ಕ ವದಂತಿಗಳಿಗೆ ಕಾರಣವಾಯಿತು, ಈ ಸಂಬAಧದ ಬಗ್ಗೆ ಕಳೆದ ೪ ತಿಂಗಳ ಹಿಂದೆ ವಿಜಯಲಕ್ಷಿö್ಮ ತಗಾದೆ ತೆಗೆದು ಪವಿತ್ರಗೌಡಳಿಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿ ಪಾಠ ಹೇಳಿದ್ದಳು.
ಇದೀಗ ಮತ್ತೋಮ್ಮೆ ಪವಿತ್ರಗೌಡ ಕಾರಣದಿಂದ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ, ‘ನನ್ನ ಅಭಿಮಾನಿ ದೇವರಾದ ದರ್ಶನ್ ಜತೆ ಯಾಕೆ ಸಂಬAಧ ಇರಿಸಿಕೊಂಡಿದ್ದೀಯಾ, ವಿಜಯಲಕ್ಷಿö್ಮಗೆ ದ್ರೋಹ ಮಾಡಬೇಡ’ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಪವಿತ್ರಗೌಡಳಿಗೆ ಸಂದೇಶ ಕಳುಹಿಸಿದ್ದ, ಹಲವು ಅಶ್ಲೀಲ ಸಂದೇಶಗಳು ಹಾಗೂ ಚಿತ್ರಗಳನ್ನೂ ಆಕೆಗೆ ರವಾನಿಸಿದ್ದ. ಇಂಥ ಸಂದೇಶ ಅಸಭ್ಯವಾಗಿದೆ ಎಂದು ಪವಿತ್ರಗೌಡ ಈ ಬಗ್ಗೆ ದರ್ಶನ್ ಜತೆ ಹೇಳಿಕೊಂಡಿದ್ದಳು, ಸುಮ್ಮನಿರಲಾರದ ದರ್ಶನ್ ಥೇಟ್ ಸಿನಿಮಾ ಶೈಲಿಯಲ್ಲಿಯೇ ರೇಣುಕನನ್ನು ಎತ್ತಾಕಿಕೊಂಡು ಬಂದು ಗೋಡೌನ್‌ನಲ್ಲಿ ದಿನಗಟ್ಟಲೆ ಚಿತ್ರಹಿಂಸೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂಸೆಯ ಪರಿಣಾಮವಾಗಿಯೇ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ, ದರ್ಶನ್ ಮತ್ತು ಗ್ಯಾಂಗ್ ಈ ಮೂಲಕ ವ್ಯಕ್ತಿಯ ಕೊಲೆಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಇದೀಗ ದರ್ಶನ್, ಪವಿತ್ರಗೌಡ ಸೇರಿದಂತೆ ೧೩ ಮಂದಿ ಪೊಲೀಸ್ ಕಸ್ಟಡಿಯಡಿ ತನಿಖೆ ಎದುರಿಸುವಂತಾಗಿದೆ.
ದರ್ಶನ್ ಕೊಲೆ ಮಾಡಿದ್ದಾನೋ ಇಲ್ಲವೋ ಮುಂದಿನ ದಿನಗಳಲ್ಲಿ ಸಾಕ್ಷಾö್ಯಧಾರಗಳ ಮೇಲೆ ನ್ಯಾಯಾಲಯ ನಿರ್ಧರಿಸಲಿದೆ, ಆದರೆ ಗೋಡೌನ್‌ನಲ್ಲಿದ್ದ ದರ್ಶನ್ ತನ್ನ ಗೆಳೆಯರ ಗ್ಯಾಂಗ್‌ಗೆ ರೇಣುಕಾ ಮೇಲೆ ಹಲ್ಲೆ ನಡೆಸುವಂತೆ ಪ್ರೋತ್ಸಾಹ, ಉತ್ತೇಜನ ನೀಡಿದ್ದಕ್ಕೆ ಪೊಲೀಸರ ಬಳಿ ಪ್ರಬಲವಾದ ಸಾಕ್ಷ್ಯಾಧಾರಗಳಿದೆ.
ದರ್ಶನ್ ಎಂಬ ಚಾಲೆಂಜಿAಗ್ ಸ್ಟಾರ್‌ಗೆ ಇದೆಲ್ಲಾ ಬೇಕಿತ್ತಾ?
ಸಮಾಜಕ್ಕೆ ಮಾದರಿಯಾಗಬೇಕಾದಂಥ ಸ್ಟಾರ್ ನಟನೋರ್ವ ಹೀಗೆಲ್ಲಾ ರಂಪ ಮಾಡಿಕೊಂಡು ಯಾವ ರೀತಿಯಲ್ಲಿ ಮಾದರಿಯಾಗುತ್ತಾನೆ, ಸರಿ ಬಿಡಿ, ತಾಳ್ಮೆಯಿಲ್ಲ, ಗೊತ್ತಾಗದೇ ಭಾಗಿಯಾಗಿದ್ದ ಎನ್ನಲಾದೀತೇ?
ಆದರೆ, ದರ್ಶನ್ ಮೇಲೆ ಈವರೆಗೆ ಇರುವುದು ಒಂದಲ್ಲ ಎರಡಲ್ಲ, ಹತ್ತಾರು ಆರೋಪಗಳೇ ಇವೆ. ಮೂರು ತಿಂಗಳ ಹಿಂದಷ್ಟೇ ಕಾಟೇರ ಬಿಡುಗಡೆ ಸಂದರ್ಭ ನಿಯಮ ಉಲ್ಲಂಘಿಸಿ ಮಧ್ಯರಾತ್ರಿ ಮೀರಿ ಪಾರ್ಟಿ ಮಾಡಿದ್ದಾರೆ ಎಂದೂ ದರ್ಶನ್ ಮೇಲೆ ಪ್ರಕರಣ ದಾಖಲಾಗಿತ್ತು, ಇಂಥ ಪ್ರಕರಣಗಳಲ್ಲಿ ಹಾಗೂ ಹೀಗೂ ಪಾರಾಗಿ ಬಂದಿದ್ದ ದರ್ಶನ್‌ಗೆ ಈ ಸಲದ ಹತ್ಯೆ ಪ್ರಕರಣ ಭಾರೀ ಚಾಲೆಂಜ್ ಉಂಟು ಮಾಡುವ ಎಲ್ಲಾ ಸಾಧ್ಯತೆ ಇದೆ. ಸರಿಯಾದ ಸಾಕ್ಷಾö್ಯಧಾರದ ಮೇಲೆ ಪೊಲೀಸರು ಪ್ರಕರಣವನ್ನು ಸೂಕ್ಷö್ಮವಾಗಿ ನಿಭಾಯಿಸಿ ನ್ಯಾಯಾಲಯದಲ್ಲಿ ದರ್ಶನ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ನಿರೂಪಿಸಿದ್ದೇ ಆದಲ್ಲಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ಕಠಿಣ ಶಿಕ್ಷೆ ಎದುರಿಸಲೇಬೇಕಾಗುತ್ತದೆ.
ಕೆಲವು ವರ್ಷಗಳ ಹಿಂದೆ ಕನ್ನಡಿಗರಿಗೆ ಡಾ. ರಾಜ್ ಕುಮಾರ್, ಸಾಹಸಸಿಂಹ ಡಾ. ವಿಷ್ಮುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ರಮೇಶ್ ಅರವಿಂದ್ ಅವರಂಥ ನಾಯಕ ನಟರು ಮಾದರಿಯಾಗಿದ್ದರು. ರಾಜ್ ನಾಯಕರಾಗಿದ್ದ ಜೀವನಚೈತ್ರ ತೆರೆ ಕಂಡ ಸಂದರ್ಭ ಆ ಚಿತ್ರದಲ್ಲಿ ಇದ್ದಂತೆ ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಹಳ್ಳಿ ಜನ ಮದ್ಯಪಾನ ತ್ಯಜಿಸಿದ್ದು ದೊಡ್ಡ ಸುದ್ದಿಯಾಗಿತ್ತು, ಈ ಮೊದಲು ರಾಜ್ ಕುಟುಂಬ ಸುಖ ಸಂಸಾರಕ್ಕೆ ಮಾದರಿಯಂತಿತ್ತು, ಎಲ್ಲಿಯೂ ಈ ನಾಯಕರು ವೈಯಕ್ತಿಕ ಜೀವನದಲ್ಲಿ ದಾರಿ ತಪ್ಪಲಿಲ್ಲ, ಮಾದರಿಯಾಗಿಯೇ ಆದರ್ಶಪ್ರಾಯವಾಗಿಯೇ ಜೀವಿಸಿದರು. ಹೀಗಾಗಿಯೇ ಇಂದಿಗೂ ಕನ್ನಡ ನಾಡು ಈ ನಟರನ್ನು ನೆನಪಿಸಿಕೊಳ್ಳುತ್ತಿದೆ. ಮಾದರಿಯಾಗಬೇಕಾದ ನಟರು ಜನರ ಜತೆ ಬೆರೆಯುವಾಗ ಮತ್ತು ಕೌಟುಂಬಿಕವಾಗಿಯೂ ತಮ್ಮ ಮಿತಿ ಅರಿತುಕೊಂಡು ಆದರ್ಶ ತೋರಬೇಕಾದ ಅನಿವಾರ್ಯತೆಯಲ್ಲಿರುತ್ತಾರೆ. ಸಿನಿಮಾದಲ್ಲಿ ತಾವು ಯಾವ ಪಾತ್ರದ ಮೂಲಕ ಜನರ ಮನಗೆದ್ದಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡು ಜನರಿಗೆ ಮೆಚ್ಚುವ ರೀತಿಯಲ್ಲಿಯೇ ನಿಜ ಜೀವನದಲ್ಲಿಯೂ ಜೀವಿಸಬೇಕಾದ ಅಗತ್ಯ ಇಂಥ ನಟರಿಗಿರುತ್ತದೆ, ಹಾದಿ ತಪ್ಪಿ ಜನರಿಂದ ಥೂ ಎನಿಸಿಕೊಂಡಾಗ ಯಾವುದೇ ಇಮೇಜ್, ಬಿರುದುಗಳು ಕಾಪಾಡುವುದಿಲ್ಲ. ನ್ಯಾಯಾಲಯದ ಕಟಕಟೆಯಲ್ಲಿ ಕಾನೂನಿನ ಚಾಲೆಂಜ್ ಎದುರಿಸಬೇಕೇ ವಿನಾ ಯಾವುದೇ ಚಾಲೆಂಜಿAಗ್ ಸ್ಟಾರ್ ಎಂದು ಹೇಳಿಕೊಂಡು ತಪ್ಪಿಸಿಕೊಳ್ಳಲಾಗುವುದಿಲ್ಲ!