*ಗೋಣಿಕೊಪ್ಪ, ಜೂ. ೧೨: ಕೀರೆಹೊಳೆ ಹೂಳೆತ್ತುವ ಕಾರ್ಯಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಜಾಗದ ಮಾಲೀಕರು ಹಾಗೂ ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು. ಗೋಣಿಕೊಪ್ಪ ಪಟ್ಟಣದಲ್ಲಿ ಹರಿಯುವ ಕೀರೆ ಹೊಳೆ ಹೂಳೆತ್ತುವ ಕಾರ್ಯ ಮೂರು ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಬುಧವಾರ ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ಹರಿಯುವ ಕೀರೆಹೊಳೆಯ ಬದಿಯಲ್ಲಿ ಜೆಸಿಬಿ ಯಂತ್ರದ ಮೂಲಕ ಹೂಳೆತ್ತುವ ಕಾರ್ಯ ಸಾಗುತ್ತಿತ್ತು.

ಈ ಸಂದರ್ಭ ಈ ಜಾಗದಲ್ಲಿ ಹೂಳೆತ್ತಿದರೆ ಭೂಕುಸಿತ ಉಂಟಾಗಿ ಕಟ್ಟಡ ಕುಸಿಯಲಿದೆ ಎಂದು ಮಾಲೀಕರಾದ ದರ್ಶನ್ ಹಾಗೂ ಕಿಲನ್ ಅವರು ಜೆಸಿಬಿ ಕಾರ್ಯ ಸ್ಥಗಿತಗೊಳಿಸಲು ಪ್ರಯತ್ನಿಸಿದರು ಎಂದು ಆಕ್ಷೇಪಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.

ಕಟ್ಟಡಕ್ಕೆ ಹಾನಿಯಾಗದಂತೆ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ಸಮಸ್ಯೆ ತರುವ ಪ್ರಯತ್ನ ನಡೆಸಬೇಡಿ. ಪಂಚಾಯಿತಿ ಕೆಲಸ ಮಾಡಲು ಬಿಡಿ ಎಂದು ಪಿಡಿಓ ಮನವಿ ಮಾಡಿದರು.