ಕಣಿವೆ, ಜೂ. ೧೩: ಒಂಟಿ ಸಲಗದ ದಾಳಿಯಿಂದ ಲಕ್ಷಾಂತರ ರೂ. ಮೌಲ್ಯದ ಕೃಷಿ ನಾಶವಾಗುತ್ತಿರುವ ಘಟನೆ ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲ ಹಾಗೂ ಕಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಗ್ರಾಮದ ಕೃಷಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನಂಪ್ರತಿ ರಾತ್ರಿ ವೇಳೆ ನಿರಂತರವಾಗಿ ತೋಟಗಳಿಗೆ ದಾಳಿ ಇಟ್ಟು ಕೃಷಿಕರ ನೆಮ್ಮದಿ ಕಸಿದಿರುವ ಒಂಟಿ ಸಲಗ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ.

ಮುಸ್ಸಂಜೆಯಾದರೆ ಸಾಕು, ಅರಣ್ಯದಿಂದ ತೋಟಗಳತ್ತ ಮುಖ ಮಾಡುವ ಒಂಟಿ ಸಲಗದಿಂದ ಕೃಷಿಕರು ಎಚ್ಚರ ತಪ್ಪಿದರೆ ಜೀವಕ್ಕೂ ಕುತ್ತು ಉಂಟಾಗುವ ಬಗ್ಗೆ ಆತಂಕದಲ್ಲಿ ದಿನಗಳೆಯುತ್ತಿದ್ದಾರೆ.

ತೋಟದ ಬೆಳೆ ಹೋದರೆ ಹೋಗಲಿ, ಯಾವ ಕಾರಣಕ್ಕೂ ಒಂಟಿ ಸಲಗದ ಸಹವಾಸಬೇಡ ಜೀವ ಉಳಿದರೆ ಸಾಕು ಎಂದು ಮನೆಯ ಹೆಂಗಸರು ಹಾಗೂ ಮಕ್ಕಳು ಕೃಷಿಕರನ್ನು ಸಂಜೆಯ ನಂತರ ತೋಟದತ್ತ ಮುಖ ಮಾಡಲು ಬಿಡುತ್ತಿಲ್ಲ.

ಕಲ್ಲೂರು ಗ್ರಾಮದ ಯುವ ಕೃಷಿಕ ಬಿಜೆಪಿ ಮುಖಂಡ ಚಂದ್ರಶೇಖರ್ ಎಂಬವರಿಗೆ ಸೇರಿದ ತೋಟಕ್ಕೆ ಬುಧವಾರ ರಾತ್ರಿ ದಾಳಿಯಿಟ್ಟ ಸಲಗ ತೋಟದಲ್ಲಿ ಫಸಲು ನೀಡುತ್ತಿದ್ದ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ನೆಲ ಸಮ ಮಾಡಿ ತಿಂದು ಹಾನಿ ಪಡಿಸಿದರೆ, ಕಾಫಿ ಗಿಡಗಳನ್ನು ತುಳಿದು ನಷ್ಟವುಂಟು ಮಾಡಿದೆ.

ಈ ಒಂಟಿ ಸಲಗವನ್ನು ಹಿಡಿದು ಬೇರೆಲ್ಲಾದರೂ ಬಿಡುವ ಮೂಲಕ ಇಲ್ಲಿನ ರೈತರು ನೆಮ್ಮದಿಯಿಂದ ರಾತ್ರಿ ಕಳೆಯಲು ಅನುವು ಮಾಡಿಕೊಡಬೇಕು ಎಂದು ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೃಷಿ ನಷ್ಟಕ್ಕೆ ತುತ್ತಾಗಿರುವ ಕಲ್ಲೂರಿನ ಚಂದ್ರಶೇಖರ್, ಅರುಣಕುಮಾರ್, ನಾಣಯ್ಯ, ಸುರೇಶ್ ಹಾಗೂ ನಾಕೂರು ಶಿರಂಗಾಲ ಗ್ರಾಮದ ಕುಮುದಾ ಧರ್ಮಪ್ಪ, ಚಿದು ಮೊದಲಾದವರು ದೂರಿದ್ದಾರೆ.

ಅರಣ್ಯ ಇಲಾಖೆ ಹೀಗೆಯೇ ಮೃಧು ಧೋರಣೆ ತಾಳಿದಲ್ಲಿ ಈ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರನ್ನು ಸಂಘಟಿಸಿ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಹೇರೂರು ಹಾಗೂ ಕಲ್ಲೂರು ಅರಣ್ಯ ಭಾಗದಿಂದ ಧಾವಿಸುವ ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತವಾದ ಯಾವ ಯೋಜನೆಗಳನ್ನು ಕೈಗೊಳ್ಳದಿರುವ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇಲ್ಲಿನ ಕೃಷಿಕರು ತೀವ್ರ ಬೇಸರ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರನ್ನು ಸಂಘಟಿಸಿ ಕುಶಾಲನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಹೇರೂರು ಹಾಗೂ ಕಲ್ಲೂರು ಅರಣ್ಯ ಭಾಗದಿಂದ ಧಾವಿಸುವ ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತವಾದ ಯಾವ ಯೋಜನೆಗಳನ್ನು ಕೈಗೊಳ್ಳದಿರುವ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇಲ್ಲಿನ ಕೃಷಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಲ್ಲೂರು ಗ್ರಾಮದ ಅರಣ್ಯದಂಚಿನ ಬೆಳೆಗಾರರ ಬಳಿ ಧಾವಿಸಬೇಕು. ಕೃಷಿಕರು ನಿತ್ಯವೂ ಎದುರಿಸುತ್ತಿರುವ ಬವಣೆಗಳನ್ನು ಖುದ್ದು ಅರಿತು ಸೂಕ್ತ ಪರಿಹಾರ ಧನ ನೀಡಬೇಕು. ಎಲ್ಲಕ್ಕಿಂತ ಮೊದಲು ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಚಂದ್ರಶೇಖರ್ ಹಾಗೂ ಅರುಣಕುಮಾರ್ ಒತ್ತಾಯಿಸಿದ್ದಾರೆ.

ವರದಿ : ಕೆ.ಎಸ್.ಮೂರ್ತಿ