ಗೋಣಿಕೊಪ್ಪಲು, ಜೂ. ೧೩: ಮಳೆಗಾಲ ಆರಂಭವಾಗುತ್ತಿದ್ದAತೆಯೇ ಹುಲಿಯ ಸಂಚಾರ ಕಾಡಿನಿಂದ ನಾಡಿನತ್ತ ಸಾಗುತ್ತಿದೆ. ಬಹುತೇಕ ದ.ಕೊಡಗಿನಲ್ಲೇ ಹುಲಿಗಳ ದರ್ಶನ ವಾಗುತ್ತಿದೆ. ಶ್ರೀಮಂಗಲ-ಟಿ.ಶೆಟ್ಟಿಗೇರಿ ಮುಖ್ಯ ರಸ್ತೆಯ ಕೊರಕೊಟ್ ದೇವಾಲಯಕ್ಕೆ ತೆರಳುವ ಸ್ಥಳದ ಬಳಿ ಹುಲಿಯು ರಸ್ತೆಯಲ್ಲಿಯೇ ಕಾಣಿಸಿಕೊಂಡಿದೆ.
ಶ್ರೀಮAಗಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಮಂಜುನಾಥ್ ಟಿ.ಎ.ಎಂಬವರು ಕರ್ತವ್ಯ ಮುಗಿಸಿ ಠಾಣೆಯಿಂದ ಬುಧವಾರ ರಾತ್ರಿ ೮.೩೦ರ ಸುಮಾರಿಗೆ ತಮ್ಮ ಬೈಕಿನಲ್ಲಿ ಪೊನ್ನಂಪೇಟೆಯ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಟಿ.ಶೆಟ್ಟಿಗೇರಿ ಬಳಿಯ ದೇವಾಲಯ ರಸ್ತೆಯ ಬಳಿ ಹುಲಿಯು ರಸ್ತೆಯಲ್ಲಿ ಪ್ರತ್ಯಕ್ಷಗೊಂಡಿದೆ.
೧೦೦ ಅಡಿ ದೂರದಿಂದ ಹುಲಿಯನ್ನು ಕಂಡ ಪೊಲೀಸ್ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಹುಲಿಯು ಸುಮಾರು ೩ ಅಡಿ ಎತ್ತರವಿದ್ದು ನೋಡಲು ದಷ್ಟಪುಷ್ಟವಾಗಿದೆ. ಈ ಹುಲಿಯು ರಸ್ತೆಯಲ್ಲಿ ದರ್ಶನ ನೀಡಿದ ನಂತರ ಸಮೀಪದ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿದೆ. ಪ್ರತಿನಿತ್ಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ನಾಗರಿಕರು ಈ ಘಟನೆಯಿಂದ ಭಯಭೀತ ಗೊಂಡಿದ್ದಾರೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಸಂಚಾರ ಇರುವುದನ್ನು ಖಾತರಿ ಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂಜಾನೆ ವೇಳೆ ಘಟನಾ ಸ್ಥಳಕ್ಕೆ ತೆರಳಿ ಹುಲಿಯ ಹೆಜ್ಜೆ ಗುರುತುಗಳನ್ನು ಗಮನಿಸಿದ್ದಾರೆ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.ದ.ಕೊಡಗಿನ ಬಹುತೇಕ ಭಾಗದಲ್ಲಿ ಹುಲಿಯ ಸಂಚಾರ ಆಗಿಂದ್ದಾಗಿಯೆ ಕಂಡು ಬರುತ್ತಿದ್ದು, ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಅಲ್ಲದೆ ಹುಲಿಗಳು ರೈತರ ಜಾನುವಾರುಗಳ ಮೇಲೆ ದಾಳಿ ನಡೆಸುವುದು ನಿರಂತರವಾಗಿ ನಡೆಯುತ್ತಿದೆ. ಹುಲಿಯ ಸಂಚಾರದ ಬಗ್ಗೆ ಅರಣ್ಯ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.