ವೀರಾಜಪೇಟೆ/ ಗೋಣಿಕೊಪ್ಪಲು, ಜೂ. ೧೩: ದಿನನಿತ್ಯ ಹೆಚ್ಚುತ್ತಿರುವ ವಾಹನ ಸಂಖ್ಯೆಗನುಗುಣವಾಗಿ ರಸ್ತೆ ಅಪಘಾತಗಳೂ ಹೆಚ್ಚುತ್ತಿವೆ. ಬಹುತೇಕ ಅಪಘಾತ-ಸಾವು ಪ್ರಕರಣಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯೇ ನೇರ ಕಾರಣವಾಗಿರುತ್ತದೆ. ಇದನ್ನು ನಿಯಂತ್ರಣಕ್ಕೆ ತರಲು ವೀರಾಜಪಟೆ ಹಾಗೂ ಗೋಣಿಕೊಪ್ಪದಲ್ಲಿ ಪೊಲೀಸರು ವಿನೂತನ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ವೀರಾಜಪೇಟೆಯಲ್ಲಿ ೨೦೦ ಹಾಗೂ ಗೋಣಿಕೊಪ್ಪದಲ್ಲಿ ೧೫೦ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ ಹಾಗೂ ಇತರ ರೀತಿ ನಿಯಮ ಉಲ್ಲಂಘನೆ ಮಾಡುವವರನ್ನು ಪೊಲೀಸರು ದಾರಿಯಲ್ಲಿ ನಿಲ್ಲಿಸಿ ದಂಡ ವಿಧಿಸುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಬದಲಿಗೆ ನಿಯಮ ಉಲ್ಲಂಘನೆ ಮಾಡುತ್ತಿರುವವರ ಫೋಟೋ, ವೀಡಿಯೋವನ್ನು ತಮ್ಮ ಫೋನ್ ಮೂಲಕ ಚಿತ್ರೀಕರಿಸಿ ಮೇಲಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ಸಂಬAಧಿಸಿದ ಅಧಿಕಾರಿಗಳು ವಾಹನ ಸಂಖ್ಯೆಯನ್ನು ಆಧರಿಸಿ ವಾಹನದ ಮಾಲೀಕರ ವಿಳಾಸ, ದೂರವಾಣಿ ಸಂಖ್ಯೆ ಪತ್ತೆ ಹಚ್ಚಿ ವಾಹನದ ವಿಮೆ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಮಗೆ ಒದಗಿಸಿರುವ ಪೊಲೀಸ್ ಆ್ಯಪ್ ಮೂಲಕ ತಪಾಸಣೆ ನಡೆಸಿ ನಿಗದಿತ ದಂಡ ವಿಧಿಸಿ ನೋಟೀಸ್ ಜಾರಿಗೊಳಿಸುತ್ತಿದ್ದಾರೆ.

ನೋಟೀಸಿಗೆ ಸ್ಪಂದಿಸದ ವಾಹನ ಸವಾರರಿಗೆ ನ್ಯಾಯಾಲಯದ ಮೂಲಕ ನೋಟೀಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ಇರುವುದು ಸೇರಿದಂತೆ ಸಾಮಾನ್ಯ ನಿಯಮ ಉಲ್ಲಂಘನೆ ಮಾಡುವವರಿಗೆ ೫೦೦ ರೂ.ದಂಡ ವಿಧಿಸುತ್ತಿದ್ದಾರೆ. ಈ ನಿಯಮ ಜಾರಿಯಾಗುತ್ತಿದ್ದಂತೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾವಣೆ ಮಾಡುವುದು ಆರಂಭವಾಗಿದೆ. ಈಗಾಗಲೆ ೧೫೦ಕ್ಕೂ ಹೆಚ್ಚಿನ ಪ್ರಕರಣ ಗೋಣಿಕೊಪ್ಪ ನಗರದ ಠಾಣೆಯಲ್ಲಿ ದಾಖಲಾಗಿದೆ. ವೀರಾಜಪೇಟೆ ಠಾಣೆಯಲ್ಲಿ ೨೦೦ ಪ್ರಕರಣಗಳು ದಾಖಲಾಗಿವೆ.

ವೀರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಕಳೆದ ೨೦ ದಿನಗಳಿಂದ ೨೦೦ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಸುಮಾರು ೭೦ಕ್ಕೂ ಹೆಚ್ಚು ಮಂದಿ ದಂಡ ಪಾವತಿ ಮಾಡಿದ್ದಾರೆ. ಉಳಿದವರಿಗೆ ನೋಟಿಸ್ ನೀಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಪಘಾತ ಹಾಗೂ ಪ್ರಾಣಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೀರಾಜಪೇಟೆ ನಗರ ಠಾಣೆಯ ಎಸ್.ಐ ರವೀಂದ್ರ ಮಾಹಿತಿ ನೀಡಿದ್ದಾರೆ. ವಾಹನ ಸವಾರರು ಸಂಚಾರಿ ನಿಯಮ ಗಳನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಬೇಕು. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ಹೊಸ ನಿಯಮ ಜಾರಿಗೆ ಬಂದಿರುವುದರಿAದ ನಗರದಲ್ಲಿನ ಟ್ರಾಫಿಕ್ ನಿಯಮ ಉಲ್ಲಂಘನೆ ಶೇ.೨೫ರಷ್ಟು ಸುಧಾರಣೆ ಕಂಡಿದೆ. ಶೇ.೧೦೦ರ ಸುಧಾರಣೆಗೆ ಕ್ರಮಗಳನ್ನು ಇಲಾಖೆಯ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ ಎಂದು ಗೋಣಿ ಕೊಪ್ಪ ಪೊಲೀಸ್ ಎಸ್.ಐ ರೂಪಾದೇವಿ ಬಿರಾದಾರ್ ಮಾಹಿತಿ ನೀಡಿದ್ದಾರೆ.