ವಿಶೇಷ ಲೇಖನ

ಶನಿವಾರಸಂತೆ, ಜೂ. ೧೩: ಪಟ್ಟಣದಲ್ಲಿ ದೇವಿಯ ದೇವಾಲಯ ಎಲ್ಲಿದೆ ಎಂದೊಡನೆ ತಕ್ಷಣ ನೆನಪಾಗುವುದು ಸ್ಥಳೀಯ ತ್ಯಾಗರಾಜ ಕಾಲೋನಿಯಲ್ಲಿರುವ ಭಕ್ತರ ಆರಾಧ್ಯ ದೈವ ಕಾರಣಿಕದ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಅನತಿ ದೂರದಲ್ಲಿ ತ್ಯಾಗರಾಜ ಕಾಲೋನಿಯ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ ಯಶಸ್ವಿ ಥಿಯೇಟರ್ ಹಿಂಭಾಗ ಪ್ರಕೃತಿಯ ಮಡಿಲಲ್ಲಿ, ಪ್ರಶಾಂತ ವಾತಾವರಣದಲ್ಲಿ ಈ ಬನವಿದೆ. ನೂರಾರು ವರ್ಷಗಳ ಇತಿಹಾಸವಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವವನ್ನು ಹಲವು ವರ್ಷಗಳವರೆಗೆ ಬೃಹತ್ ಗಾತ್ರದ ನಾಲ್ಕು ಬರ್ಲುಕಡ್ಡಿ ಮರಗಳ ಬುಡದಲ್ಲಿ ಕಲ್ಲುಗಳ ರೂಪದಲ್ಲಿ ಪೂಜಿಸಲಾಗುತ್ತಿತ್ತು.

ಉದ್ಯಮಿ ಕೋಟಿ ಪೂಜಾರಿಯವರಿಂದ ಪ್ರತಿಷ್ಠಾಪಿಸಲ್ಪಟ್ಟು, ಪೂಜಿಸಲ್ಪಟ್ಟು, ವಾರ್ಷಿಕ ಪೂಜೆ ವಿಜೃಂಭಣೆಯಿAದ ನಡೆದು ಅಪಾರ ಭಕ್ತ ವೃಂದದವರನ್ನು ಆಕರ್ಷಿಸಿತ್ತು. ನಂತರ ಕೋಟಿ ಪೂಜಾರಿಯವರ ಸೊಸೆ, ಜಾಗದ ವಾರಸುದಾರರಾದ ಉಮಾವತಿ ಗಂಗಪ್ಪ ಕರ್ಕೇರ ಕುಟುಂಬದವರಿAದ ಪೂಜಿಸಲ್ಪಡುತ್ತಿತ್ತು. ಅಂದಿನಿAದ ಕರ್ಕೇರ ಕುಟುಂಬದವರ ಜತೆ ಶನಿವಾರಸಂತೆ ಗ್ರಾಮಸ್ಥರು ಹಾಗೂ ತ್ಯಾಗರಾಜ ಕಾಲೋನಿಯ ಭಕ್ತರು ನಿಷ್ಠೆಯಿಂದ ನಂಬಿ ಸಂಕಲ್ಪ ಮಾಡಿಕೊಂಡು, ಪೂಜೆ ಸಲ್ಲಿಸುತ್ತಾ ಬರುತ್ತಿದ್ದರು. ೩ ವರ್ಷಗಳ ಹಿಂದೆ ಬನವನ್ನು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಕರ್ಕೇರ ಕುಟುಂಬದವರು ಉಡುಪಿಯ ತಂತ್ರಿಗಳನ್ನು ಕರೆಸಿ ಆರೂಢ ಪ್ರಶ್ನೆ ಇರಿಸಿದರು. ದೇವಿ ಹಾಗೂ ದೈವವನ್ನು ಪೀಠಗಳಲ್ಲಿ ಪ್ರತಿಷ್ಠಾಪಿಸಿ, ಪ್ರತ್ಯೇಕವಾದ ತೆರೆದ ಗುಡಿ ನಿರ್ಮಿಸಿ ಪೂಜಿಸುವಂತೆ ತಿಳಿಸಲಾಯಿತು. ಈ ಹಿನ್ನಲೆಯಲ್ಲಿ ಬನದಲ್ಲಿ ಸ್ಥಳೀಯ ಅರ್ಚಕರಿಂದ ೧೮ ವಿವಿಧ ಹೋಮಗಳು ಹಾಗೂ ಪೂಜಾ ಕೈಂಕರ್ಯಗಳು ನಡೆದು ಶ್ರೀಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ತಲಕಾವೇರಿ ಮತ್ತಿತರ ದೇವಾಲಯಗಳಲ್ಲಿ ಪುಂಡಿಪಣವು ಅರ್ಪಿಸಲಾಯಿತು. ಬನದಲ್ಲಿ ತೆರೆದ ಗುಡಿ ಹಾಗೂ ದೇವರ ಬಾವಿಯನ್ನು ನಿರ್ಮಿಸಲಾಯಿತು. ೨೦೨೧ ರಲ್ಲಿ ಮಂಗಳೂರಿನ ತಲಪಾಡಿಯ ಪುರೋಹಿತರಾದ ಗಣೇಶ್ ಭಟ್ ಹಾಗೂ ತಂಡದ ೧೪ ಮಂದಿ ಅರ್ಚಕರು ಎರಡು ದಿನಗಳ ಕಾಲ ವಿವಿಧ ಹೋಮಗಳು, ಬ್ರಹ್ಮ ಕಲಶೋತ್ಸವ, ತಂಬಿಲಸೇವೆ, ಚಂಡಿಕಾ ಯಾಗವನ್ನು ಮಾಡಿ, ಪದ್ಮಪೀಠದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಲಿಂಗ ರೂಪದ ಪೀಠದಲ್ಲಿ ಗುಳಿಗ ದೈವವನ್ನು ಅವಾಹಿಸಿ ಪ್ರತಿಷ್ಠಾಪನೆ ಮಾಡಿದರು.

ಸಂಕ್ರಮಣದAದು ಪೂಜೆ: ಅಂದಿನಿAದ ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ರದಾಯದAತೆ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ತಿಂಗಳು ಸಂಕ್ರಮಣದ ದಿನ ಬೆಳಿಗ್ಗೆ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದು ತೀರ್ಥ-ಪ್ರಸಾದ ವಿನಿಯೋಗವಾಗುತ್ತದೆ. ಪೀಠಗಳನ್ನು ಹೂವುಗಳಿಂದ ಅಲಂಕರಿಸಿ, ಎಳನೀರು, ಹಣ್ಣುಕಾಯಿ, ಹರಳು-ಅವಲಕ್ಕಿ ಹಾಗೂ ನೈವೇದ್ಯ ಅರ್ಪಿಸಿ ಪೂಜಿಸಲಾಗುತ್ತದೆ. ಕರ್ಕೇರ ಕುಟುಂಬಕ್ಕೆ ಸೀಮಿತವಾಗಿದ್ದ ಬನ ಇಂದು ಗ್ರಾಮ ದೇವರ ಕ್ಷೇತ್ರವಾಗಿದ್ದು ಅಪಾರ ಭಕ್ತಸ್ತೋಮವನ್ನು ಆಕರ್ಷಿಸುತ್ತಿದೆ. ಭಕ್ತರು ಸಂಕಲ್ಪ ಮಾಡಿ ಪೂಜೆ ಸಲ್ಲಿಸಿ, ವಾರ್ಷಿಕ ಪೂಜೆಯಂದು ಹರಕೆ ಸಲ್ಲಿಸುತ್ತಾರೆ. ಶುಭ ಕಾರ್ಯಾರಂಭಕ್ಕೆ ಮುನ್ನ ಭಕ್ತರು ಬನಕ್ಕೆ ಬಂದು ಪೂಜೆ ಸಲ್ಲಿಸಿ ಮುಂದುವರೆಯುವುದು ವಿಶೇಷವೆನಿಸಿದೆ.

ವಾರ್ಷಿಕ ಪೂಜೆ: ಬನದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ೨ ದಿನ ವಾರ್ಷಿಕ ಪೂಜೆ ನಡೆಯುತ್ತದೆ. ಬನವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಮೊದಲ ದಿನ ಬ್ರಾಹ್ಮಣ ಪುರೋಹಿತರು ವಿವಿಧ ಹೋಮಗಳು, ಪುಣ್ಯಾಹ, ಅಭಿಷೇಕದೊಂದಿಗೆ ದೇವಿ ಹಾಗೂ ಗುಳಿಗ ದೈವವನ್ನು ಪೂಜಿಸುತ್ತಾರೆ. ಎರಡನೇ ದಿನ ಬಲಿ ಪೂಜೆ ನಡೆಯುತ್ತದೆ. ಸಂಕಲ್ಪ ಮಾಡಿ, ಹರಕೆ ಹೇಳಿಕೊಂಡ ಭಕ್ತರು, ಗ್ರಾಮಸ್ಥರು ಹರಕೆ ಒಪ್ಪಿಸಿ, ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಎರಡು ದಿನವೂ ಅನ್ನ ಸಂತರ್ಪಣೆ ನಡೆಯುತ್ತದೆ. ಬನದಲ್ಲಿ ಪ್ರತಿ ತಿಂಗಳ ಸಂಕ್ರಮಣ ಪೂಜೆಯ ಜತೆಗೆ ದಸರಾ ಸಮಯದಲ್ಲಿ ನವರಾತ್ರಿ ಪ್ರಯುಕ್ತ ೧೦ ದಿನಗಳಲ್ಲೂ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇತರ ಧಾರ್ಮಿಕ ಹಬ್ಬಗಳ ದಿನ ಭಕ್ತರು ಗುಡಿಯ ಹೊರಭಾಗದಲ್ಲಿ ನಿಂತು ಪೂಜೆ ಸಲ್ಲಿಸುತ್ತಾರೆ. ಸಂಕ್ರಮಣದ ದಿನದಂದು ಮಾತ್ರ ಬೆಳಿಗ್ಗೆ ೧೧ ಗಂಟೆಯವರೆಗೆ ಗುಡಿಯ ಒಳಭಾಗದಲ್ಲಿ ಅರ್ಚಕರಾದ ಪ್ರಕಾಶ್ ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ಚಾಮುಂಡೇಶ್ವರಿ ದೇವಿ ಮತ್ತು ಗುಳಿಗನಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ವಾರ್ಷಿಕ ಪೂಜೆ ಹಾಗೂ ಸಂಕ್ರಮಣ ಪೂಜೆಯಂದು ಸ್ಥಳೀಯ ಭಕ್ತರು ಹಾಗೂ ವಿವಾಹವಾಗಿ ಹೋದ ಹೆಣ್ಣುಮಕ್ಕಳು ಮತ್ತು ಉದ್ಯೋಗ ನಿಮಿತ್ತ ಪರ ಸ್ಥಳದಲ್ಲಿ ಇರುವವರು ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೃಷಿ, ಉದ್ಯೋಗ, ವಿವಾಹ, ಸಂತಾನ ಭಾಗ್ಯ ಇತ್ಯಾದಿ ವಿಚಾರಗಳಲ್ಲಿ ಭಕ್ತರು ಪ್ರಾರ್ಥಿಸಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗುತ್ತಿರುವಂತೆ ಚಾಮುಂಡೇಶ್ವರಿ ದೇವಿ ದುಂಬಿ ರೂಪದಲ್ಲಿ, ಹೂವು ಬೀಳುವುದು ಇಲ್ಲವೇ ತ್ರಿಶೂಲ ಕ್ಷಣ ಕಂಪಿಸುವ ಮೂಲಕ ದರ್ಶನ ನೀಡುತ್ತಿದ್ದು, ಭಕ್ತರು ಪ್ರತ್ಯಕ್ಷದರ್ಶಿಗಳಾಗಿ ಪುಲಕಿತರಾಗುತ್ತಾ ಅಪಾರ ನಂಬಿಕೆ ವ್ಯಕ್ತಪಡಿಸುತ್ತಾರೆ. ಇಷ್ಟಾರ್ಥ ನೆರವೇರಿದರೆ, ಸಮಸ್ಯೆ ಪರಿಹಾರವಾದರೆ ಹರಕೆ ರೂಪದಲ್ಲಿ ಹೂವಿನ ಅಲಂಕಾರ, ಎಳನೀರು ಅಭಿಷೇಕ ಇತರ ಸೇವೆಗಳನ್ನು ಸಲ್ಲಿಸುತ್ತಾರೆ. ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾ ರಕ್ಷಣೆ ನೀಡುತ್ತಾ ದಿವ್ಯಶಕ್ತಿಯಿಂದ ತನ್ನ ಕ್ಷೇತ್ರದತ್ತ ಸೆಳೆಯುತ್ತಿದೆ. ಭಕ್ತಿ ಪೂರ್ವಕವಾಗಿ ಶ್ರದ್ಧೆಯಿಂದ ಪ್ರಾರ್ಥಿಸಿದರೆ ನಮ್ಮ ಸಂಕಷ್ಟಗಳು ಮಾಯವಾಗಿವೆ. ಜೀವನದಲ್ಲಿ ಒಳ್ಳೆಯದಾಗಿ ಅಭಿವೃದ್ಧಿ ಹೊಂದಿದ್ದೇವೆ ಎನ್ನುತ್ತಾರೆ ಭಕ್ತರು. ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ. ಬಾವಿ ನಿರ್ಮಾಣವಾಗಿದೆ. ಕಚೇರಿ ಕೊಠಡಿಯೊಂದರ ನಿರ್ಮಾಣವಾಗುತ್ತಿದೆ. ಇನ್ನು ಅಡುಗೆ ಕೊಠಡಿ, ಊಟದ ಸಭಾಂಗಣ, ಗುಡಿಯ ಸುತ್ತ ಚಪ್ಪಡಿ ಕಲ್ಲಿನ ಹಾಸು, ಹೋಮ ಸ್ಥಳದ ಮೇಲ್ಭಾಗ ಶೀಟುಗಳ ನಿರ್ಮಾಣ, ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ಇದೆ. ಯೋಜನೆ ಕಾರ್ಯರೂಪಕ್ಕೆ ಬರಲು ಅನುದಾನ, ಭಕ್ತರ, ದಾನಿಗಳ ಔದಾರ್ಯದ ಅಗತ್ಯವೂ ಇದೆ. ಎಲ್ಲವೂ ಒದಗಿ ಬಂದಾಗ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನ ಬೆಳಗುತ್ತದೆ.

- ಶ.ಗ. ನಯನತಾರಾ, ಶನಿವಾರಸಂತೆ.