ಮಡಿಕೇರಿ, ಜೂ. ೧೩: ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ನಿರ್ಮಾಣಗೊಂಡಿರುವ ಮೇಲ್ಸೇತುವೆ ಕೆಳಭಾಗದ ಸ್ಥಳದಲ್ಲಿ ಭಾಗಮಂಡಲ - ತಲಕಾವೇರಿ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತು ಮೈಸೂರಿನಿಂದ ಆಗಮಿಸಿದ್ದ ಮಿನಿ ಬಸ್ ಒಂದರ ಚಕ್ರವು ಹುದುಗಿಕೊಂಡಿದ್ದು, ಜೆ.ಸಿ.ಬಿ ಯಂತ್ರದ ಸಹಾಯದಿಂದ ಹಗ್ಗ ಹಾಕಿ ಬಸ್ ಅನ್ನು ಎಳೆದು ಮುಖ್ಯ ರಸ್ತೆಗೆ ತರಲಾಯಿತು.

ಮೇಲ್ಸೇತುವೆ ಕೆಳಭಾಗದಲ್ಲಿನ ಮಣ್ಣು ಪ್ರದೇಶದ ಮೇಲೆ ಕಾಟಾಚಾರಕ್ಕೆ ಜಲ್ಲಿಕಲ್ಲನ್ನು ಸುರಿಯಲಾಗಿದೆ. ಇದರ ಮೇಲೆ ಕನಿಷ್ಟ ಪಕ್ಷ ರೋಡ್ ರೋಲರ್ ಅನ್ನು ಕೂಡ ಚಲಿಸದೆ ಹಾಗೆ ಬಿಟ್ಟಿದ್ದರಿಂದ ಭಾರೀ ವಾಹನಗಳಿಗೆ ಸಮಸ್ಯೆ ಎದುರಾಗಿದೆ ಎಂದು ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.