ಸೋಮವಾರಪೇಟೆ, ಜೂ. ೧೪: ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ ತ್ವರಿತ ಗತಿಯಲ್ಲಿ ಕೆಲಸ ಮಾಡಿಕೊಡಲು ಕಂದಾಯ ಇಲಾಖೆ ಸಿದ್ಧವಿದೆ ಎಂದು ತಾಲೂಕು ತಹಶೀಲ್ದಾರ್ ನವೀನ್‌ಕುಮಾರ್ ಹೇಳಿದರು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವಷ್ಟು ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ತಹಶೀಲ್ದಾರರನ್ನು ಭೇಟಿ ಮಾಡಿದ ಸಂದರ್ಭ, ಸಾರ್ವಜನಿಕ ಅಹವಾಲುಗಳನ್ನು ಆಲಿಸಿದ ನವೀನ್‌ಕುಮಾರ್, ಆದ್ಯತೆಯ ಮೇರೆ ಕಡತಗಳ ವಿಲೇವಾರಿ ಮಾಡಲಾಗುವುದು. ಕಾನೂನು ಭಾಗದಲ್ಲಿ ಆಗುವ ಕೆಲಸ ಕಾರ್ಯಗಳನ್ನು ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದರು.
ಶಾAತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ದುರಸ್ತಿಗೆ ನೀಡಿದ ಕಡತಗಳು ಹಲವಷ್ಟು ವರ್ಷಗಳಿಂದ ಬಾಕಿ ಉಳಿದಿದೆ. ನಮ್ಮ ಜಾಗದ ಸ್ಕೆಚ್‌ಗಳು ಬೇರೆಯವರ ಜಾಗಕ್ಕೆ, ಬೇರೆಯವರ ಜಾಗದ ಸ್ಕೆಚ್‌ಗಳು ನಮ್ಮ ಜಾಗಕ್ಕೆ ಅಳವಡಿಸಲಾಗಿದೆ. ಸರ್ವೆ ಇಲಾಖೆಯ ಈ ಕ್ರಮದಿಂದಾಗಿ ಬಡ ರೈತರು ಇಂದಿಗೂ ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಶಾಂತಳ್ಳಿ ಹೋಬಳಿಯಲ್ಲಿ ಸಭೆ ಕರೆಯಲಾಗುವುದು. ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಗೌಡಳ್ಳಿಯಲ್ಲಿ ೩೦ ಕುಟುಂಬಗಳು ಕಳೆದ ಅನೇಕ ವರ್ಷಗಳಿಂದ ನೆಲೆಸಿರುವ ಜಾಗವು ಇದೀಗ ಶಾಲೆಗೆ ಸೇರಿದ್ದು ಎಂದು ತಗಾದೆ ತೆಗೆಯಲಾಗಿದೆ. ನಾವುಗಳು ಇಲ್ಲಿ ವಾಸ ಮಾಡುತ್ತಿರುವುದಕ್ಕೆ ಸರ್ಕಾರ ಹಕ್ಕುಪತ್ರವನ್ನೂ ನೀಡಿದೆ. ಇದೀಗ ಜಾಗವು ಶಾಲೆಗೆ ಸೇರಿದ್ದೆಂದು ಹೇಳುತ್ತಿರುವುದರಿಂದ ನಮಗೆ ಅಭದ್ರತೆ ಕಾಡುತ್ತಿದೆ ಎಂದು ಅಲ್ಲಿನ ನಿವಾಸಿಗಳು ಸಮಸ್ಯೆ ವಿವರಿಸಿದರು.
ಸಂಬAಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಭರವಸೆ ನೀಡಿದರು. ಅರೆಯೂರಲ್ಲಿ ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಒತ್ತುವರಿ ಮಾಡಿಕೊಂಡಿರುವವರನ್ನು ಬಿಟ್ಟು ನಮ್ಮ ಜಾಗದಲ್ಲಿ ಸರ್ವೆ ನಡೆಸಿ, ಕೆರೆ ಒತ್ತುವರಿಯಾಗಿದೆ ಎಂದು ಕಿರುಕುಳ ನೀಡುತ್ತಿದ್ದಾರೆ. ಆದರೆ ನಾವು ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರಾದ ಕಿಶನ್, ಪಾಸಿಲ್ ಸೇರಿದಂತೆ ಇತರರು ಹೇಳಿದರು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಕನಿಷ್ಟ ೭ ದಿನಗಳ ಒಳಗೆ ನೀಡಲು ಕ್ರಮ ವಹಿಸಬೇಕೆಂದು ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಒತ್ತಾಯಿಸಿದರು. ಇದರೊಂದಿಗೆ ದುರಸ್ತಿ ಕಡತ, ಸ್ಕೆಚ್ ಸಮಸ್ಯೆಗಳನ್ನು ಆದಷ್ಟು ಶೀಘ್ರ ಬಗೆಹರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸಮಿತಿ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಕಾನೂನು ಸಲಹೆಗಾರ ಜೀವನ್, ಪದಾಧಿಕಾರಿಗಳಾದ ಸಂದೀಪ್ ಯಡವಾರೆ, ಲೋಹಿತ್ ಕೋಟೆಯೂರು, ಅಶ್ವಥ್, ಭರತ್, ಹೂವಯ್ಯ ಮಾಸ್ಟರ್, ಬೆಂಬಳೂರು ಪ್ರಕಾಶ್, ಕೊಡ್ಲಿಪೇಟೆ ಅವಿನಾಶ್, ಮಾದಾಪುರ ಭವಿನ್, ರವಿ ರುದ್ರಪ್ಪ, ತ್ರಿಶೂಲ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.