x
ಕುಶಾಲನಗರ, ಜೂ. ೧೪: ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿ ಸಹಕರಿಸಿದಲ್ಲಿ ಮಾತ್ರ ಪಟ್ಟಣ ಅಪರಾಧ ಮುಕ್ತವಾಗಲು ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಭೇಟಿ ನೀಡಿ ನಂತರ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಭಿವೃದ್ಧಿಯ ನಡುವೆ ಕಳ್ಳತನ, ವಂಚನೆ, ಸುಲಿಗೆ ಮತ್ತಿತರ ಪ್ರಕರಣಗಳು ನಡೆಯುತ್ತವೆ. ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಪೊಲೀಸ್ ಸಿಬ್ಬಂದಿಗಳ ಕೊರತೆಯ ನಡುವೆ ಪ್ರಕರಣಗಳು ಸಂಭವಿಸುತ್ತವೆ.
ಪೊಲೀಸರೊಂದಿಗೆ ನಾಗರಿಕರ ಸಹಾಯ ಮೂಲಕ ಅತೀ ಶೀಘ್ರದಲ್ಲಿ ಅಪರಾಧಿಗಳ ಪತ್ತೆ ಸಾಧ್ಯ ಎಂದು ಕುಶಾಲನಗರದಲ್ಲಿ ನಡೆದ ಕೆಲವು ಪ್ರಕರಣಗಳ ಬಗ್ಗೆ ವ್ಯಾಖ್ಯಾನಿಸಿ ಅವರು ಹೇಳಿದರು. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ನೇತೃತ್ವದ ಕುಶಾಲನಗರ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಸುತ್ತಮುತ್ತ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಅವರು ಕೋರಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಸೋಮವಾರಪೇಟೆ ಉಪ ವಿಭಾಗದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಪರಾಧ ಮುಕ್ತ ಸಮಾಜದ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲಾಖೆಯ ಮೂಲಕ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳನ್ನು ಪೊಲೀಸ್ ನೈಟ್ ಬೀಟ್ಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಚಿಂತನೆ ಹರಿಸಲಾಗಿದೆ ಎಂದರು. ವಾಹನ ಸವಾರರು ಯಾವುದೇ ಸಂದರ್ಭ ಸಂಚಾರಿ ನಿಯಮಗಳನ್ನು ಉಲ್ಲಂಘಿಸದAತೆ ಅವರು ಕಿವಿಮಾತು ಹೇಳಿದರು. ಯಾವುದೇ ಸ್ಥಳಗಳಲ್ಲಿ ನಡೆಯುವ ಅಪರಾಧ, ವಂಚನೆ ಮತ್ತಿತರ ವಿಷಯಗಳ ಬಗ್ಗೆ ಪೊಲೀಸ್ ಇಲಾಖೆಗೆ ಕೂಡಲೇ ಮಾಹಿತಿ ನೀಡುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು.
ಪೊಲೀಸ್ ಇಲಾಖೆಗೆ ಮಾಹಿತಿ ನೀಡುವವರ ಬಗ್ಗೆ ಯಾವುದೇ ರೀತಿಯಲ್ಲಿ ಸುಳಿವು ಬಹಿರಂಗವಾಗದAತೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಗೌಪ್ಯ ಕಾಪಾಡುತ್ತಾರೆ. ನಾಗರಿಕರು ಯಾವುದೇ ಭಯ,ಅಳುಕಿಲ್ಲದೆ ಸಮಾಜಘಾತಕ ಶಕ್ತಿಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು. ಸಭೆಯಲ್ಲಿ ಕುಶಾಲನಗರ ಪಟ್ಟಣ ಠಾಣೆಯ ಇನ್ಸ್ಪೆಕ್ಟ್ಟರ್ ಪ್ರಕಾಶ್ ಮತ್ತು ಸ್ಥಳೀಯ ಪ್ರಮುಖರು ಇದ್ದರು.