ಸುಂಟಿಕೊಪ್ಪ, ಜೂ. ೧೩: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಕೋಣ ಹಾಗೂ ಮಂಗಗಳ ಉಪಟಳದಿಂದ ಬೆಳೆಗಾರರು ಹೈರಾಣಾರಾಗಿದ್ದಾರೆ. ಕೆದಕಲ್ ವ್ಯಾಪ್ತಿಯಲ್ಲಿ ಗುಂಪಾಗಿ ಕಾಡುಕೋಣಗಳು ತೋಟಗಳಲ್ಲಿ ಕಾಣಸಿಗುತ್ತಿದ್ದು, ಇದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯಪಡುವ ಸ್ಥಿತಿ ಎದುರಾಗಿದೆ. ಕಾಡುಕೋಣಗಳು ತೋಟದೊಳಗೆ ಗುದ್ದಾಟ ನಡೆಸುತ್ತಿರುವುದರಿಂದ ಕಾಫಿ ಗಿಡಗಳು ಫಲಭರಿತ ಮರಗಿಡಗಳು ನಾಶವಾಗುತ್ತಿವೆ. ಅಲ್ಲದೆ ಕೆಲ ಬೆಳೆಗಾರರು ಬೆಣ್ಣೆ ಹಣ್ಣಿನ ಗಿಡಗಳನ್ನು ನೆಟ್ಟಿದ್ದು, ಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ. ಹಣ ವ್ಯಯಿಸಿ ತೋಟದಲ್ಲಿ ಗಿಡಗಳನ್ನು ನೆಟ್ಟಿದ್ದು ಪ್ರಾಣಿಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬಂದಿದೆ. ಮತ್ತೊಂದೆಡೆ ಮಂಗಗಳು ಬೆಳೆಗಳನ್ನು ತಿಂದು ನಾಶಪಡಿಸುತ್ತಿದೆ. ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯವರಿಗೆ ಕರೆ ಮಾಡಿದರೆ ಇಲಾಖೆಯ ಸಿಬ್ಬಂದಿಗಳು ಬಂದು ಪಟಾಕಿ ಸಿಡಿಸಿ ಬೆದರಿಸುತ್ತಾರೆ. ಆದರೆ ಮರುದಿನ ಮತ್ತೆ ತೋಟಗಳಲ್ಲಿ ಪ್ರಾಣಿಗಳು ಪ್ರತ್ಯಕ್ಷವಾಗುತ್ತದೆ. ತೋಟದೊಳಗೆ ಜನಗಳನ್ನು ಕಂಡರೆ ಕಾಡುಕೋಣಗಳು ದಿಕ್ಕಾಪಾಲಾಗಿ ಓಡಾಡುತ್ತಿದ್ದು, ಇದರಿಂದ ಕಾರ್ಮಿಕರು ಹಾಗೂ ಬೆಳೆಗಾರರು ಭಯದಿಂದ ಜೀವನ ಸಾಗಿಸುತ್ತಿದ್ದಾರೆ. ಅರಣ್ಯ ಇಲಾಖೆ ಈ ಪ್ರಾಣಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಕೆದಕಲ್ ಭಾಗದ ಬೆಳೆಗಾರರು ಒತ್ತಾಯಿಸಿದ್ದಾರೆ. -ರಾಜು ರೈ