ಕಣಿವೆ, ಜೂ. ೧೪: ಜಾತಿಯಿಂದ ಮನುಷ್ಯನನ್ನು ಅಳೆಯದೆ ವಿಶಾಲ ಹೃದಯದಿಂದ ಇವ ನಮ್ಮವ ಎಂಬ ಭಾವದಿಂದ ನೋಡಿ ಎಂದು ಅರಸೀಕೆರೆ ತಾಲೂಕು ಕೋಡಿ ಮಠ ಸಂಸ್ಥಾನದ ಶ್ರಿ ಶಿವಾನಂದ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು.
ತೊರೆನೂರು ಗ್ರಾಮದಲ್ಲಿ ಶುಕ್ರವಾರ ಪೂಜಾ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾದ ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮ ಪ್ರಕೃತಿ ಆರಾಧನಾ ಧರ್ಮವಾಗಿದೆ.
ವೀರಶೈವ ಧರ್ಮಕ್ಕೆ ಜಾತಿಯ ಸಂಕೋಲೆ ಇಲ್ಲ. ಜಗದಗಲ, ಮಿಗೆಯಗಲ, ಮುಗಿಲಗಲ, ಅಪ್ರತಿಮ, ಅಗೋಚರವಾದ ಲಿಂಗವನ್ನು ಪ್ರತಿಯೊಬ್ಬರು ಧಾರಣೆ ಮಾಡುವ ಮೂಲಕ ಸುಪ್ರಭಾತ ಸಮಯದಲ್ಲಿ ಕರದಲ್ಲಿ ಹಿಡಿದು ಪೂಜಿಸಿದಲ್ಲಿ ಅಪಮೃತ್ಯು ಕಾಡುವುದಿಲ್ಲ. ಕಣ್ಣಿನ ದೃಷ್ಟಿಯ ಮೂಲಕ ಮನುಷ್ಯನ ದೇಹಕ್ಕೆ ಆವಾಹಿಸುವ ಅವ್ಯಕ್ತ ಶಕ್ತಿ ದೇಹದಲ್ಲಿನ ರೋಗಗಳನ್ನು ದೂರ ಮಾಡುತ್ತದೆ. ಹೃದಯಕ್ಕೆ ಶುದ್ಧ ಆಮ್ಲಜನಕವನ್ನು ಪೂರೈಸಿ ಹೃದಯವಂತನಾಗಿಸುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು.
(ಮೊದಲ ಪುಟದಿಂದ) ಯಾವ ಮಠಗಳು ಹಾಗೂ ಯಾವುದೇ ಸ್ವಾಮೀಜಿಗಳು ಜಾತಿಯಿಂದ ಮನುಷ್ಯನನ್ನು ಅಳೆಯಬಾರದು.
ಇವನಾರವ ಎನ್ನದೇ ಇವ ನಮ್ಮವ ಎನ್ನಬೇಕು.
ಆಧುನಿಕ ಜೀವನ ಶೈಲಿ ಮನುಷ್ಯನನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ವಿಷಾದಿಸಿದ ಶ್ರೀಗಳು, ಪುರಾತನ ಸಂಸ್ಕೃತಿ ಹಾಗೂ ಆಚಾರ - ವಿಚಾರಗಳ ಪಾಲನೆ ಮಾಡುವ ಮೂಲಕ ಸನ್ನಡತೆಯನ್ನು ಹೊಂದಬೇಕು ಎಂದು ಯುವ ಸಮೂಹಕ್ಕೆ ಶ್ರೀಗಳು ಕರೆಕೊಟ್ಟರು. ಈ ಸಂದರ್ಭ ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬ ಶಿವಮೂರ್ತಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ತೊರೆನೂರು ಗ್ರಾಮದ ಹಿರಿಯರಾದ ಚಂದ್ರಶೇಖರ್, ಶಿಕ್ಷಕರಾದ ರಮೇಶ್, ಬಸವರಾಜು, ರಾಜಶೇಖರ್, ಸುಂದರೇಶ್, ಮಲ್ಲಿಕಾರ್ಜುನ, ನಿವೃತ್ತ ಉಪನ್ಯಾಸಕ ಚಂದ್ರಶೇಖರ್, ಜ್ಞಾನೇಶ ಹಾಗೂ ಇತರರಿದ್ದರು.