ಮಡಿಕೇರಿ, ಜೂ. ೧೩ : ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಲ್ಲಿ ಇದೀಗ ಉತ್ತಮ ಮಳೆಯಾಗಿದ್ದು, ಮುಂಗಾರು ಆರಂಭದ ಸನ್ನಿವೇಶದೊಂದಿಗೆ ಹಿಂದಿನ ವರ್ಷಗಳ ರೀತಿ ಕೃಷಿ ಕೆಲಸ ಕಾರ್ಯಗಳು ಸಕಾಲದಲ್ಲಿ ಆರಂಭಗೊಳ್ಳುತ್ತಿವೆ. ಬೇಸಿಗೆ ಸಂದರ್ಭದಲ್ಲಿ ತೀರಾ ತಡವಾಗಿ ಮಳೆಯಾದರೂ ಇದೀಗ ಮೇ ತಿಂಗಳಿನಿAದಲೇ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವುದು ಈ ವರ್ಷದ ಬದಲಾವಣೆಯಂತಿದೆ. ಜನವರಿಯಿಂದ ಈ ತನಕ ಜಿಲ್ಲೆಗೆ ಸರಾಸರಿ ೧೯.೦೩ ಇಂಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ೧೧.೨೫ ಇಂಚುಗಳಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಾದ ಮಡಿಕೇರಿಯಲ್ಲಿ ೨೬.೯೬ ಇಂಚು, ವೀರಾಜಪೇಟೆ ೧೬.೫೧, ಪೊನ್ನಂಪೇಟೆ ೧೭.೭೭, ಸೋಮವಾರಪೇಟೆ ೧೬.೦೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೭.೮೪ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ೧೨.೦೫, ವೀರಾಜಪೇಟೆ ೫.೩೫, ಪೊನ್ನಂಪೇಟೆ ೫.೯೯ ಸೋಮವಾರಪೇಟೆ ೫.೮೬ ಹಾಗೂ ಕುಶಾಲನಗರ ತಾಲೂಕಿನಲ್ಲಿ ೯.೬೦ ಇಂಚುಗಳಷ್ಟು ಮಾತ್ರ ಮಳೆಯಾಗಿತ್ತು.

ಈ ಬಾರಿ ಜೂನ್ ೨ನೇ ವಾರದ ವೇಳೆಗೆ ಜಿಲ್ಲೆಯಾದ್ಯಂತ ಉತ್ತಮವಾದ ಮಳೆಯಾಗಿರುವ ಹಿನ್ನೆಲೆ ಕೃಷಿ - ಕೆಲಸ ಕಾರ್ಯಗಳೂ ಈಗಿನಿಂದಲೇ ಚುರುಕುಗೊಳ್ಳುತ್ತಿವೆ. ಗದ್ದೆಗಳಲ್ಲಿ ನೀರಿಗೆ ಕೊರತೆ ಇಲ್ಲದಿರುವುದರಿಂದ, ಬಿತ್ತನೆ ಕಾರ್ಯಕ್ಕೆ ಗದ್ದೆಯನ್ನು ಹಸನುಗೊಳಿಸಲಾಗುತ್ತಿದೆ. ಹಲವಾರು ಕಡೆಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿತ್ತನೆ ಕಾರ್ಯವೂ ಆರಂಭಗೊಳ್ಳುವ ಸಾಧ್ಯತೆಯಿದೆ. ಭತ್ತ ಬೆಳೆಯುವ ಕೃಷಿಕರು ಪ್ರಸಕ್ತ ವರ್ಷ ಒಂದಷ್ಟು ಹೆಚ್ಚಿನ ಉತ್ಸಾಹದಲ್ಲಿರುವುದು ಕಂಡು ಬಂದಿದೆ. ಟ್ರಾö್ಯಕ್ಟರ್, ಟಿಲ್ಲರ್‌ಗಳ ಮೂಲಕ ಉಳುಮೆ ಕಾರ್ಯ ಅಲ್ಲಲ್ಲಿ ಭರದಿಂದ ಸಾಗುತ್ತಿದೆ.

ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯೂ ರೈತರಿಗೆ ಬಿತ್ತನೆ ಬೀಜ, ಅಗತ್ಯ ರಸಗೊಬ್ಬರ ವಿತರಣೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಕೆಲವು ಕೃಷಿಕರ ಅನುಭವದಂತೆ ಜೂನ್ ಎರಡನೇ ವಾರದ ವೇಳೆಗೆ ಕೃಷಿಗೆ ಪೂರಕವಾದ ಒಂದಷ್ಟು ಕೆಲಸ ಕಾರ್ಯಗಳು ಚುರುಕುಗೊಳ್ಳುತ್ತಿರುವುದು ಹಲವು ವರ್ಷಗಳ ಅಂತರದ ಬಳಿಕ ಎನ್ನಲಾಗುತ್ತಿದೆ.