ಸೋಮವಾರಪೇಟೆ, ಜೂ. ೧೩: ನಿವೇಶನ ರಹಿತ ಕಡುಬಡವರು ಹಾಗೂ ಕೂಲಿಕಾರ್ಮಿಕರಿಗೆ ನಿವೇಶನ ಮತ್ತು ವಸತಿ ನೀಡಬೇಕು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ಸದಸ್ಯರು, ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೇಡಿಕೆಗಳ ಈಡೇರಿಕೆಗಾಗಿ ಘೋಷಣೆ ಕೂಗಿದರು.

ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಹಲವು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದು, ಲೈನ್ ಮನೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕರಿಗೆ ಯಾವುದೇ ಸರಕಾರಗಳು ನಿವೇಶನ ನೀಡಲು ಮುಂದಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಪೈಸಾರಿ ಜಾಗ ಇದ್ದರೂ, ಅದು ಉಳ್ಳವರ ಪಾಲಾಗುತ್ತಿದೆಯೇ ಹೊರತು ಬಡ ಕೂಲಿ ಕಾರ್ಮಿಕರಿಗೆ ನೀಡಲು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೆಚ್.ಎಂ.ಸೋಮಪ್ಪ ಆರೋಪಿಸಿದರು.

ಕೊಡಗಿನ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಹುಲಿ ಮತ್ತು ಕಾಡಾನೆ ಧಾಳಿಗೆ ಬಲಿಯಾಗುತ್ತಿದ್ದಾರೆ. ಅರಣ್ಯ ಇಲಾಖೆ ಪರಿಹಾರದ ಚೆಕ್ ನೀಡಿ ಕೈ ತೊಳೆದುಕೊಳ್ಳುತ್ತಿದೆಯೇ ಹೊರತು ವನ್ಯ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರದ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು. ಕಳೆದ ನಾಲ್ಕು ತಿಂಗಳಿನಿAದ ಕಾಡಾನೆ ಹಾವಳಿ ಹೆಚ್ಚಾಗಿದ್ದರೂ ಇದರ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿಲ್ಲ. ಕಾಡಾನೆ ಹಾವಳಿಯ ನೈಜತೆಯನ್ನು ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಜೇಸೀ ವೇದಿಕೆಯಲ್ಲಿ ಸಮಾವೇಶಗೊಂಡು ಪ್ರತಿಭಟನೆ ಮುಂದುವರೆಸಿದರು. ಕ್ಷೇತ್ರದ ಶಾಸಕರು, ಜಿಲ್ಲೆಯ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಬೇಕೆಂದು ಪಟ್ಟು ಹಿಡಿದರು. ಮಧ್ಯಾಹ್ನದವರೆಗೂ ಧರಣಿ ನಡೆಸಿದ ಪ್ರತಿಭಟನಾಕಾರರು ಪೊಲೀಸ್ ಇಲಾಖೆಯ ಅಧಿಕಾರಿಗಳ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ನAತರ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹಾಗೂ ಉಪತಹಶೀಲ್ದಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಐಟಿಯುಸಿ ತಾಲೂಕು ಕಾರ್ಯದರ್ಶಿ ಸುಂದರ್, ತಾಲೂಕು ಸಂಚಾಲಕ ಶೇಷಪ್ಪ, ಸಿ.ಪಿ.ಐ ಪ್ರಧಾನ ಕಾರ್ಯದರ್ಶಿ ಕೆ.ವಿ. ಸುನಿಲ್, ಕಾರ್ಯದರ್ಶಿ ಶಬಾನಾ, ದಲಿತ ಸಂಘಟನೆಯ ರಮೇಶ್ ಮತ್ತಿತರರು ಇದ್ದರು.