ಕುಶಾಲನಗರ, ಜೂ. ೧೪: ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ನಡೆಯಿತು. ಕುಶಾಲನಗರ ಪೊಲೀಸ್ ವಿಶ್ರಾಂತಿ ಗ್ರಹದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಸುಂದರ್ ರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯ ಮುಸ್ಲಿಂ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಹಬ್ಬವನ್ನು ಸಾಂಪ್ರದಾಯಿಕವಾಗಿ ಶಾಂತಿಯುತ ವಾಗಿ ಆಚರಿಸುವಂತೆ ಸಲಹೆ ನೀಡಿದರು. ಯಾವುದೇ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ ಎಂದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಡಿ.ವೈ.ಎಸ್.ಪಿ. ಆರ್.ಪಿ. ಗಂಗಾಧರಪ್ಪ, ಹಬ್ಬದ ಸಂದರ್ಭ ಯಾವುದೇ ರೀತಿಯ ಗೊಂದಲ ಉಂಟಾಗದAತೆ ಎಚ್ಚರಿಕೆ ವಹಿಸಬೇಕು. ಪೊಲೀಸ್ ಇಲಾಖೆ ಮೂಲಕ ಎಲ್ಲ ರೀತಿಯ ಸಹಕಾರ ಇದ್ದೇ ಇರುತ್ತದೆ . ಹಬ್ಬದ ಹೆಸರಿನಲ್ಲಿ ಗೋಮಾಂಸ ಸಾಗಾಟ ಮತ್ತಿತರ ಸಂಘರ್ಷಮಯ ಚಟುವಟಿಕೆಗಳು ನಡೆಯದಂತೆ ಅವರು ಕಿವಿ ಮಾತು ಹೇಳಿದರು.
ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸ್ಥಳೀಯ ಮಸೀದಿಗಳ ಆಡಳಿತ ಮಂಡಳಿ ಪ್ರತಿನಿಧಿಗಳು, ಮುಸ್ಲಿಂ ಸಮುದಾಯದ ಪ್ರಮುಖರು ಇದ್ದರು.