ಇಂದು ರಕ್ತದಾನಿಗಳ ದಿನ

ಎಲ್ಲಾ ಜೀವಿಗಳ ದೇಹದ ರಕ್ಷಕ ಮತ್ತು ಪೋಷಕ ಶಕ್ತಿ ಅದು ರಕ್ತವೇ. ಇದು ಕೆಂಪು ಬಣ್ಣದ ದ್ರವ. ಇದಕ್ಕೆ ರುಧಿರ, ನೆತ್ತರು, ಮೊದಲಾದ ಹೆಸರುಗಳಿವೆ. ನಮಗೆ ಪ್ರಕೃತಿ ನೀಡಿದ ಅತ್ಯಮೂಲ್ಯವಾದ ಕೊಡುಗೆಗಳಲ್ಲಿ ರಕ್ತವು ಒಂದು. ಹಲವಾರು ಶ್ರೇಷ್ಠದಾನಗಳಲ್ಲಿ ರಕ್ತದಾನವು ಮಹತ್ವವಾದದ್ದು. ಆರೋಗ್ಯವಂತ ಮನುಷ್ಯನ ದೇಹದಲ್ಲಿ ೫ ಲೀಟರ್ ರಕ್ತ ಇರಬೇಕು. ಆದರೆ ಬಹಳಷ್ಟು ಜನರು ರಕ್ತದ ಕೊರತೆಯಿಂದ ನರಳುತ್ತಿರುತ್ತಾರೆ. ಗರ್ಭಧಾರಣೆ, ಹೆರಿಗೆ, ಅಪಘಾತ ಸಂದರ್ಭ ಚಿಕ್ಕ ಮಕ್ಕಳಿಗೆ, ವೃದ್ಧರಿಗೆ ರಕ್ತದ ಅವಶ್ಯಕತೆ ಕಂಡು ಬಂದಾಗ ರಕ್ತದಾನ ಮಾಡಲು ಸಂಬAಧಿಕರು ಬೇಡಿಕೆ ಇಡುತ್ತಾರೆ. ಅಪಘಾತವಾದ ಸ್ಥಳದಲ್ಲಿ ರಕ್ತವನ್ನು ನೋಡಿದರೆ ಭಯದಿಂದ ಪ್ರಜ್ಞೆ ಕಳೆದುಕೊಳ್ಳುವವರು ಹಲವು ಮಂದಿ.

೧೮ ದಿನಗಳ ಯುದ್ಧ ನಂತರ ಕುರುಕ್ಷೇತ್ರ ರಕ್ತದ ಕೆಸರಲ್ಲಿ ಮುದ್ದೆ ಮುದ್ದೆಯಾಗಿ ಬಿದ್ದಿದ್ದ ಕುದುರೆ, ಆನೆ, ಸೈನಿಕರ ಚಿತ್ರಣವಿದೆ. ಕುವೆಂಪುರವರ "ಬೆರಳ್‌ಗೆ ಕೊರಳ್" ನಾಟಕದಲ್ಲಿ ಏಕಲವ್ಯನ ಕೈಬೆರಳನ್ನು ಕತ್ತರಿಸಿದ ರಕ್ತ ನೋಡಿದ ಏಕಲವ್ಯನ ತಾಯಿಯ ಶಾಪಕ್ಕೆ ದ್ರೋಣರು ಗುರಿಯಾಗಿ ಏಕಲವ್ಯನ ಬೆರಳಿಗೆ ಪ್ರತಿಯಾಗಿ ದ್ರೋಣರ ಕೊರಳನ್ನು ಅರ್ಜುನನೇ ಕೊಯ್ಯುವಂತಹ ಸಂದರ್ಭದ ಭೀಕರ ಕಥೆ ಇದೆ.

ರಕ್ತ ಬಿಜಾಸುರನ ಕಥೆಯಲ್ಲಿ ರಕ್ತದ ಒಂದೊAದು ಹನಿಯಲ್ಲೂ ರಾಕ್ಷಸರು ಹುಟ್ಟಿಕೊಳ್ಳುತ್ತಿದ್ದರು. ಹಾಗೆಯೇ ರಕ್ತದ ಒಂದು ಹನಿ ಹನಿಗೂ ತನ್ನದೇ ಆದ ಜೀವಕೋಶದ ಮೌಲ್ಯವಿದೆ. ಕ್ರೂರ ಪ್ರಾಣಿಗಳು ಬೇಟೆಯ ಸಂದರ್ಭ ಕುತ್ತಿಗೆಯಿಂದ ರಕ್ತವನ್ನು ಹಿರಿ ನಿತ್ರಾಣಗೊಳಿಸುತ್ತವೆ. ಮಹಾಭಾರತದಲ್ಲಿ ಚೇಳು ಕರ್ಣನ ತೊಡೆಕೊರೆದ ಕಾರಣದಿಂದ ಹರಿದ ರಕ್ತವನ್ನು ನೋಡಿದ ಪರಶುರಾಮರು ಕರ್ಣನಿಗೆ ಶಾಪ ನೀಡಿದರೆಂಬುದು ಮಹಾಕಾವ್ಯದಿಂದ ತಿಳಿಯುತ್ತದೆ.

ಈ ಎಲ್ಲಾ ಹಿನ್ನಲೆಯೊಂದಿಗೆ..

ಜೂನ್ ೧೪ನ್ನು ವಿಶ್ವದಾದ್ಯಂತ "ರಕ್ತದಾನಿಗಳ ದಿನ" ಎಂದು ಆಚರಿಸಲಾಗುತ್ತದೆ. ಪ್ರಥಮ ಬಾರಿಗೆ ರಕ್ತದ ಗುಂಪು ಕಂಡುಹಿಡಿದವರು ಕಾರ್ಲ್ಯಾಂಡ್ ಸ್ಟೆನರ್ ಎಂಬ ವಿಜ್ಞಾನಿ ಅವರ ಹುಟ್ಟುಹಬ್ಬದ ನೆನಪಿಗಾಗಿ ೨೦೦೪ ರಿಂದ "ವಿಶ್ವ ಆರೋಗ್ಯ ಸಂಸ್ಥೆ"ಯು "ರಕ್ತ ದಾನಿಗಳ ದಿನ"ವನ್ನು ಆಚರಿಸಲು ಜಾರಿಗೆ ತಂದಿತು. ವಿಶ್ವ ರಕ್ತದಾನಿಗಳ ದಿನಾಚರಣೆಯ ಘೋಷ ವಾಕ್ಯವೆಂದರೆ "ರಕ್ತದಾನ ಮಾಡುವುದು ಒಗ್ಗಟ್ಟಿನ ಪ್ರಕ್ರಿಯೆ ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಿ ಜೀವ ಉಳಿಸೋಣ" ಎಂಬುದಾಗಿದೆ. ಜಗತ್ತಿನ ಅತಿ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಮತ್ತೊಬ್ಬ ಮನುಷ್ಯನ ದೇಹಕ್ಕೆ ಸೇರಿಸಿ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದೇ ರಕ್ತದಾನ. ಒಮ್ಮೆ ಸಂಗ್ರಹಿಸಿದ ರಕ್ತವನ್ನು ೩೦ ರಿಂದ ೩೫ ದಿನಗಳವರೆಗೆ ಮಾತ್ರ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ನಂತರದ ದಿನಗಳಲ್ಲಿ ಅದನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ೧೮ ವರ್ಷ ಮೇಲ್ಪಟ್ಟ ೬೦ ವರ್ಷದ ಒಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು. ಹೀಗೆ ರಕ್ತದಾನ ಮಾಡುವುದರಿಂದ ದೇಹವು ಉಲ್ಲಾಸದಿಂದ ಕೂಡಿರುತ್ತದೆ. ಜೊತೆಗೆ ದಾನಿಗೆ ಹೃದಯಘಾತ, ಪಾರ್ಶ್ವ ವಾಯುವಿನಂತಹ ಕಾಯಿಲೆಗಳು ಕಡಿಮೆಯಾಗುತ್ತವೆ. ಭೂಮಿಯಲ್ಲಿ ಎಲ್ಲ ವಸ್ತುವಿಗೂ ಪರ್ಯಾಯವಾದುದು ಮತ್ತೊಂದು ವಸ್ತುವಿದೆ. ಆದರೆ ರಕ್ತಕ್ಕೆ ಪರ್ಯಾಯವಾದ ಮತ್ತೊಂದು ಇಲ್ಲ. ಕೃತಕವಾಗಿ ಇದನ್ನು ಉತ್ಪಾದಿಸಲು ಸಾಧ್ಯವಿಲ್ಲ. ಬೇರೊಬ್ಬ ಮನುಷ್ಯನ ದೇಹದಿಂದಲೇ ಅದನ್ನು ಪಡೆಯಬೇಕು.

ಮನುಷ್ಯ ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ಆ ದಾನಿಯ ದೇಹದಿಂದ ರಕ್ತ ಉತ್ಪತ್ತಿಯನ್ನು ಆರಂಭಿಸುತ್ತದೆ. ೨೪ ಗಂಟೆಯಲ್ಲಿ ದಾನ ಮಾಡಿದ ಪ್ರಮಾಣದ ರಕ್ತ ದಾನಿಯ ದೇಹದಲ್ಲಿ ಪುನಃ ಉತ್ಪತ್ತಿಯಾಗುತ್ತದೆ. ಆದ್ದರಿಂದ ದಾನಿಗಳು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ರಕ್ತದಲ್ಲಿ ಕೊಬ್ಬಿನಂಶ ಕಡಿಮೆಯಾಗುತ್ತದೆ. ಹೃದಯಘಾತ ಶೇ. ೮೦ಕ್ಕಿಂತಲೂ ಹೆಚ್ಚು ತಡೆಗಟ್ಟಬಹುದು. ರಕ್ತದೊತ್ತಡ ಇತರ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳಬಹುದು.

ಹೆಣ್ಣು-ಗಂಡು, ಧರ್ಮ-ಜಾತಿ ಎಂಬ ಭೇದ ಭಾವವಿಲ್ಲದೆ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪುರುಷರಾದರೆ ಮೂರು ತಿಂಗಳಿಗೊಮ್ಮೆ, ಮಹಿಳೆಯರಾದರೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಹಾಗೆಯೇ ದಾನಿಯ ದೇಹದ ತೂಕ ೪೫ ಕೆ.ಜಿ.ಗಿಂತ ಹೆಚ್ಚಿಗೆ ಇರಬೇಕು. ಹಾಗೆಯೇ ಹಿಮೋಗ್ಲೋಬಿನ್ ಅಂಶ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು. ಅಂಥವರು ಮಾತ್ರ ರಕ್ತದಾನ ಮಾಡಲು ಅರ್ಹರಾಗಿರುತ್ತಾರೆ. ಮಾದಕ ವ್ಯಸನಿಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಎದೆ ಹಾಲು ಉಣಿಸುವವರು, ಲಸಿಕೆ ಪಡೆದವರು, ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು, ದೊಡ್ಡ ದೊಡ್ಡ ಶಸ್ತç ಚಿಕಿತ್ಸೆಗೆ ಒಳಗಾದವರು, ಹೆಚ್‌ಐವಿ ರೋಗಿಗಳು, ಕ್ಯಾನ್ಸರ್, ಹೃದಯ ರೋಗಿಗಳು ರಕ್ತದಾನ ಮಾಡಲು ಅರ್ಹರಲ್ಲ. ಆದರೆ ಎಂತಹ ಆರೋಗ್ಯವಂತ ವ್ಯಕ್ತಿ ದಾನ ಮಾಡಿದರೂ ಆ ರಕ್ತವನ್ನು ರೋಗಪೀಡಿತ ವ್ಯಕ್ತಿಗೆ ನೀಡುವ ಮೊದಲು ರೋಗಗಳಿಂದ ಮುಕ್ತವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗೆ ಒಳಪಡಿಸಿ ನಂತರ ರೋಗಿಗೆ ನೀಡಲಾಗುತ್ತದೆ.

ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಸೊಪ್ಪು ಹಣ್ಣು ತರಕಾರಿಗಳಿವೆ. ವಿಶೇಷವಾಗಿ ದಾಳಿಂಬೆ, ಕಿತ್ತಳೆ, ಕಿವಿ, ಕೆಂಪು ಹಣ್ಣುಗಳು, ಸೇಬು, ಬೀಟ್ರೂಟ್, ಏಪ್ರಿಕಾಟ್, ಮೊಳಕೆ ಕಾಳು, ಸೂರ್ಯಕಾಂತಿ - ಕುಂಬಳ ಬೀಜಗಳು, ಖರ್ಜೂರ, ಕಪ್ಪು ಬೆಲ್ಲ ಇತ್ಯಾದಿ. ಇದು ದೇಹದ ರಕ್ತಕಣಗಳನ್ನು ಹೆಚ್ಚು ಮಾಡಿ ಕೆಂಪು ರಕ್ತ ಕಣಗಳ ಪ್ರಮಾಣವೂ ಕೂಡ ಹೆಚ್ಚಿ ಹಿಮೋಗ್ಲೋಬಿನ್ ಮಟ್ಟ ವೃದ್ಧಿಯಾಗುವಂತೆ ಮಾಡುತ್ತದೆ. ನಮ್ಮ ದೇಹದಲ್ಲಿ ರಕ್ತವು ರಕ್ತನಾಳಗಳ ಮೂಲಕ ಹರಿಯುವಾಗ ಪ್ರತಿ ಜೀವ ಕೋಶಕ್ಕೂ ಪೋಷಕ ಅಂಶಗಳನ್ನು ಕೊಂಡೊಯ್ಯುತ್ತದೆ.

ರಕ್ತಹೀನತೆ ಅಸ್ವಸ್ಥತೆಗಳಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ದೇಹದಲ್ಲಿ ಸರಿಯಾದ ರಕ್ತವು ಪೂರೈಕೆಯಾಗುತ್ತಿರಬೇಕು. ದೀರ್ಘಕಾಲದ ಕಾಯಿಲೆಗಳಿಂದ ಕಳಪೆ ಆಹಾರದ ಸೇವನೆಯಿಂದ ಕೆಲವು ಔಷಧಿಗಳಿಂದ ಅನುವಂಶಿಕವಾಗಿ ದೇಹದಲ್ಲಿ ರಕ್ತದ ಮಟ್ಟ ಇಳಿಕೆಯಾಗುತ್ತದೆ. ದೇಹದಲ್ಲಿ ರಕ್ತವು ಕಡಿಮೆಯಾದರೆ ತಲೆತಿರುಗುವಿಕೆ, ಮೂರ್ಛೆ ಹೋಗುವುದು, ಕಡಿಮೆ ರಕ್ತದ ಒತ್ತಡ ಬಾಧಿಸುತ್ತದೆ. ನಮ್ಮ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕವನ್ನು ಸರಿಯಾಗಿ ತಲುಪಿಸಲು ಸಾಕಷ್ಟು ರಕ್ತವು ದೇಹದಲ್ಲಿ ಇರಬೇಕು. ಇಲ್ಲದಿದ್ದರೆ ಆಯಾಸ, ದೌರ್ಬಲ್ಯ, ಗೊಂದಲ ಹಾಗೂ ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ. ದೇಹದಲ್ಲಿನ ರಕ್ತದ ಕಡಿಮೆ ಇರುವಿಕೆಯು ಹೃದಯವನ್ನು ವೇಗವಾಗಿ ಬಡಿಯುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಅನಿಯಮಿತ ಹೃದಯದ ಬಡಿತ ಉಂಟಾಗುತ್ತದೆ. ಇದು ದೇಹದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ವಿಶ್ವ ರಕ್ತದಾನಿಗಳ ದಿನವಾದ ಇಂದು ಪ್ರಪಂಚದಾದ್ಯAತ ಅನೇಕ ರಕ್ತದಾನ ಶಿಬಿರಗಳು ನಡೆಯುತ್ತವೆ. ರಕ್ತದಾನ ಮಾಡುವ ಮೂಲಕ ದಾನಿಗಳು ಈ ಅಭಿಯಾನವನ್ನು ಬೆಂಬಲಿಸಿದAತೆಯೂ ಆಗುತ್ತದೆ. ರೋಗಿಯ ಜೀವ ಉಳಿಸಿದಂತೆಯೂ ಆಗುತ್ತದೆ. ನೀವು ರಕ್ತದಾನ ಮಾಡಿ ತಮ್ಮ ಸ್ನೇಹಿತರು ಕುಟುಂಬ ನೆರೆಕೆರೆಯವರೊಂದಿಗೆ ಮಾತನಾಡಿ ಅವರು ಅರ್ಹರಾಗಿದ್ದರೆ ರಕ್ತದಾನ ಮಾಡಲು ಅವರನ್ನು ಪ್ರೋತ್ಸಾಹಿಸಬಹುದು. ತುರ್ತುಚಿಕಿತ್ಸೆಯ ಸಂದರ್ಭದಲ್ಲಿ ರಕ್ತದಾನಿಗಳು ದೇವರಿಗೆ ಸಮಾನರಾಗಿರುತ್ತಾರೆ. ರೋಗಿಗಳ ಕುಟುಂಬದವರ ಆಶೀರ್ವಾದ ಸದಾ ಅವರ ಮೇಲಿರುತ್ತದೆ. ಅಲ್ಲವೇ....

- ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕಿ, ಕಾವೇರಿ ಕಾಲೇಜು, ಗೋಣಿಕೊಪ್ಪಲು.