*ಗೋಣಿಕೊಪ್ಪ, ಜೂ. ೧೩: ಬುಡಕಟ್ಟು ಸಮುದಾಯಗಳ ಅಸ್ತಿತ್ವಕ್ಕಾಗಿ ಸಮುದಾಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಗಳಿಸಬೇಕು ಎಂದು ಬೆಂಗಳೂರಿನ ನ್ಯೂ ಇಂಡಿಯನ್, ಗುಡ್ ಶಫರ್ಡ್ ಫೌಂಡೇಶನ್ ಕಾರ್ಯದರ್ಶಿ ಸತ್ಯಪ್ಪ ಗುರಿಕಾರ್ ಕರೆ ನೀಡಿದರು.

ತಿತಿಮತಿ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಹಿಂದುಳಿದ ಹಾಗೂ ಶೋಷಿತ ಸಮುದಾಯವಾಗಿ ಬುಡಕಟ್ಟು ಜನಾಂಗದವರು ಗುರುತಿಸಿಕೊಂಡಿದ್ದಾರೆ. ಸಮಾಜದ ಮುಖ್ಯ ವಾಹಿನಿಗೆ ಬಂದು ಅಗ್ರಗಣ್ಯ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಲು ಮಕ್ಕಳು ವಿದ್ಯಾವಂತರಾಗಬೇಕಾಗಿದೆ. ಸಮಾಜದ ಗಣ್ಯವ್ಯಕ್ತಿಗಳಾಗಿ ಇಲ್ಲವೇ ಹಿರಿಯ ಅಧಿಕಾರಿಗಳಾಗಿ ಈ ಸಮಾಜದ ಮುಂದುವರೆದ ಭಾಗವಾಗಿ ಗುರುತಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ರಾಜ್ಯಾದ್ಯಂತ ಸುಮಾರು ೩೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಗ್ಲೋಬಲ್ ಕೌನ್ಸಿಲ್ ಏಷ್ಯಾ ಪ್ರದೇಶದ ಮಾಜಿ ಟ್ರಸ್ಟಿ, ಡಾ. ಸಿ.ಎನ್ ರಾಜು ಮಾತನಾಡಿದರು.

ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಹೆಚ್.ಎಸ್. ಮಹೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ದೇವರಪುರ ಗ್ರಾ.ಪಂ. ಸದಸ್ಯ ಬಸಂತ್‌ಕುಮಾರ್, ಮುಖ್ಯ ಶಿಕ್ಷಕ ಸಿದ್ದಲಿಂಗಶೆಟ್ಟಿ, ಮಕ್ಕಳ ಮಂದಿರ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ದೊಡ್ಡಯ್ಯ, ಪ್ರಮುಖರುಗಳಾದ ಗಂಗಾಧರ್, ನರೇಶ್ ಕುಮಾರ್, ಹೋರಾಟಗಾರ್ತಿ ಮುತ್ತಮ್ಮ, ಶಾಲೆಯ ಸಹ ಶಿಕ್ಷಕರುಗಳಾದ ಉಮಾ ಸುರೇಶ್, ಧುನು ಕೆ.ಡಿ, ದಿವ್ಯಾ ಪಿಎಸ್, ರೀನಾ ಹೆಚ್.ಟಿ, ವನಿತಾ ಕುಮಾರಿ ಹೆಚ್.ಇ, ಶರಿನ್ ಸಿ.ಕೆ, ಆಶಾ ಸಿ.ಎಂ, ವಿದ್ಯಾರ್ಥಿಗಳು ಹಾಜರಿದ್ದರು. ಇದಕ್ಕೂ ಮೊದಲು ಚೆನ್ನಂಗಿ ಬಸವನಹಳ್ಳಿ ಶಾಲೆ ವಿದ್ಯಾರ್ಥಿಗಳಿಗೂ ಲೇಖನಿ ಸಾಮಗ್ರಿಗಳನ್ನ ವಿತರಿಸಲಾಯಿತು.