ವೀರಾಜಪೇಟೆ, ಜೂ. ೧೪: ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಶಾನ್‌ಬೋಗ್ ಕಟ್ಟಡದಲ್ಲಿರುವ ಎಟೆಕ್ ಎಜುಕೇಶನಲ್ ಸೆಂಟರ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶಂಕರಾಚಾರ್ಯ ಟ್ರಸ್ಟ್ ಹಾಗೂ ಮೈಸೂರಿನ ನೈಸ್ ಸಂಸ್ಥೆಯ ಸಹಯೋಗದೊಂದಿಗೆ ಉದ್ಯೋಗ ಮೇಳ ನಡೆಯಿತು.

ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಪುರಸಭೆ ಸದಸ್ಯ ಎಸ್.ಎಚ್. ಮತೀನ್, ಇದೊಂದು ಉತ್ತಮ ಕಾರ್ಯಕ್ರಮ. ನಮ್ಮ ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಮುಂದೆ ಯಾವ ಕೆಲಸವನ್ನು ಮಾಡಬಹುದು. ಅವರ ವಿದ್ಯಾಹರ್ತೆಗೆ ತಕ್ಕಂತೆ ಉದ್ಯೋಗ ಸಿಗಬೇಕು ಎಂದು ನಿರ್ಧರಿಸಲು ಈ ರೀತಿಯ ಉದ್ಯೋಗ ಮೇಳ ಬಹಳ ಸಹಕಾರಿಯಾಗಿದೆ. ವೀರಾಜಪೇಟೆ ನಗರದಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಉದ್ಯೋಗ ಮೇಳಗಳು ನಡೆದರೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ದೊರೆತಂತಾಗುತ್ತದೆ. ಉದ್ಯೋಗ ಮೇಳಗಳ ಲಾಭವನ್ನು ಎಲ್ಲರೂ ಪಡೆದುಕೊಳ್ಳುವಂತಾಗುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಪುರಸಭೆ ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಮಾತನಾಡಿ ಸ್ಥಳೀಯ ಮಕ್ಕಳಿಗೆ ತಮ್ಮ ಕೌಶಲ್ಯ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ವಿನಿಮಯ ಮಾಡಿಕೊಳ್ಳಲು ಈ ಸಂಸ್ಥೆಯು ಕೊಡಗಿನಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಸಂಸ್ಥೆ ವತಿಯಿಂದ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳು ರೂಪುಗೊಳ್ಳಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಟೆಕ್ ಎಜುಕೇಶನಲ್ ಸಂಸ್ಥೆಯ ಪ್ರಮುಖರಾದ ಶಫೀರ್ ಮಾತನಾಡಿ, ವೀರಾಜಪೇಟೆ ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿಧ್ಯಾರ್ಥಿಗಳು ವಿನೂತನ ವಿದ್ಯಾಭ್ಯಾಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡಬೇಕು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬೇಕು, ಕೆಲವರು ಮನೆಯಲ್ಲಿ ಕುಳಿತುಕೊಂಡು ಉತ್ತಮ ಉದ್ಯೋಗ ಮಾಡಿ ಉತ್ತಮ ಸಂಬಳ ಪಡೆಯಬಹುದು, ಆಧುನಿಕ ಯುಗದಲ್ಲಿ ಯಾವ ರೀತಿಯ ಕಾರ್ಯವನ್ನು ನಿರ್ವಹಿಸಬಹುದು ಎನ್ನುವುದರ ಕುರಿತು ಇಲ್ಲಿ ಕಲಿಸಿಕೊಡಲಾಗುತ್ತದೆ. ಅದೇ ರೀತಿಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಸಂಸ್ಥೆಯ ಪ್ರಮುಖರಾದ ಖಮರುದ್ದಿನ್ ನೆರವೇರಿಸಿದರು.

ಸುಮಾರು ಹದಿನೈದು ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊಡಗಿನ ಸುಮಾರು ೧೫೦ ಮಂದಿ ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿದ್ದರು.

ಆಶೀರ್ವಾದ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಸಿದ್ದಿಖ್ ಹಂಸ, ಸ್ಥಳೀಯ ಸಂಸ್ಥೆಯ ಮೇಲ್ವಿಚಾರಕರಾದ ಸೋನ ಅನನ್‌ಶವ, ಸಾಬೀರ ಸೇರಿದಂತೆ ಇತರರು ಇದ್ದರು.