ಮಡಿಕೇರಿ, ಜೂ. ೧೩: ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ ಸೇವೆ ನೀಡುವ ಮೂಲಕÀ ಸಾರಿಗೆ ವಲಯದ ಬಲವರ್ಧನೆಗೆ ಹೆಚ್ಚಿನ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಡಿಕೇರಿ ಶಾಸಕ ಮಂತರ್ ಗೌಡ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಡಿಕೇರಿ-ಸೋಮವಾರಪೇಟೆ ನಡುವಿನ ಬಸ್ ಸೇವೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದ್ದು, ಮಡಿಕೇರಿಯಿಂದ ಸೋಮವಾರ ಪೇಟೆಗೆ ಅಶ್ವಮೇಧ ಬಸ್ ಸೇವೆ ಒದಗಿಸಲಾಗಿದೆ. ಬೆಳಿಗ್ಗೆ ಸೋಮವಾರ ಪೇಟೆಗೆ ಬಸ್ ಓಡಾಟ ಇರದ ಹಿನ್ನೆಲೆ ಸರಕಾರದ ಗಮನ ಸೆಳೆದು ಬಸ್ ಪಡೆದು ಸೇವೆಗೆ ಮುಕ್ತಗೊಳಿಸಲಾಗಿದೆ. ಬೆಳಿಗ್ಗೆ ೧೦-೧೫ಕ್ಕೆ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ಬಸ್ ನಂತರ ಅರಕಲಗೂಡು, ಹಾಸನದ ಮಾರ್ಗವಾಗಿ ಬೆಂಗಳೂರಿಗೆ ತೆರಳಿ ಮಡಿಕೇರಿಗೆ ವಾಪಾಸ್ ಆಗಲಿದೆ ಎಂದು ಮಾಹಿತಿ ನೀಡಿದರು.
ಬಸ್ ಇಲ್ಲದೆ ಜನರು ಬಹಳ ಸಮಯ ಕಾಯುವ ಪರಿಸ್ಥಿತಿ ಇತ್ತು. ಹೊಸ ಬಸ್‌ನಿಂದ ತೊಂದರೆ ದೂರವಾಗಿದೆ. ಶಾಸಕನಾಗಿ ಸ್ಥಳೀಯ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ತನ್ನ ಮೇಲಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆ ಇಲ್ಲದ ಬಗ್ಗೆ ದೂರು ಹೆಚ್ಚಿದೆ. ಈ ನಿಟ್ಟಿನಲ್ಲಿ ಕುಶಾಲನಗರ ಸರಕಾರಿ ಬಸ್ ಡಿಪೋ ಆರಂಭಿಸಲಾಗುತ್ತಿದ್ದು, ಕಾಮಗಾರಿ ಯೂ ಪ್ರಗತಿಯಲ್ಲಿದೆ. ಸದ್ಯದಲ್ಲಿಯೇ ಇದು ಲೋಕಾರ್ಪಣೆಗೊಳ್ಳಲಿದೆ. ಇದರಿಂದ ಜಿಲ್ಲೆಯಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಾಗಲಿದ್ದು, ಜನರಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಮಡಿಕೇರಿ ಸರಕಾರಿ ಬಸ್ ಡಿಪೋ ವ್ಯವಸ್ಥಾಪಕ ಹೆಚ್.ಇ. ವೀರಭದ್ರಸ್ವಾಮಿ, ಸಹಾಯಕ ಸಂಚಾರ ಅಧೀಕ್ಷಕ ಈರ್ಸಪ್ಪ, ಸಹಾಯಕ ಕಾರ್ಯ ಅಧೀಕ್ಷಕ ಮೆಹಬೂಬ್ ಅಲಿ ಸೇರಿದಂತೆ ಘಟಕದ ಸಿಬ್ಬಂದಿ, ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಜರಿದ್ದರು.