ಗೋಣಿಕೊಪ್ಪಲು, ಜೂ. ೧೫: ರಾತ್ರಿಯ ವೇಳೆ ಪಿಕ್ಅಪ್ ಜೀಪಿನಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ಕೊಡಗಿನ ಗಡಿಭಾಗವಾದ ಕುಟ್ಟ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಕರ್ನಾಟಕ - ಕೇರಳ ಗಡಿಭಾಗವಾದ ಕುಟ್ಟ ಚೆಕ್ಪೋಸ್ಟ್ನಲ್ಲಿ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಕೇರಳ ನೋಂದಣಿ ಹೊಂದಿರುವ ಪಿಕ್ಅಪ್ ಜೀಪು ಆಗಮಿಸಿದೆ.
ಪಿಕ್ಅಪ್ ಜೀಪಿನ ಮೇಲ್ಬಾಗದಲ್ಲಿ ಸೌದೆಯನ್ನು ತುಂಬಿ ಕೆಳ ಭಾಗದಲ್ಲಿ ೩ ನೊಗ ಮರದ ದಿಮ್ಮಿಗಳನ್ನು ತುಂಬಿಸಿಕೊAಡು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುವ ಪ್ರಯತ್ನ ನಡೆಸಲಾಗಿತ್ತು.
ತಪಾಸಣೆ ವೇಳೆ ಜೀಪಿನ ಚಾಲಕ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುವುದನ್ನು ಕಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಆತನನ್ನು ವಿಚಾರಣೆ ಮಾಡುವ ವೇಳೆ ಅಲ್ಲಿಂದ ಪರಾರಿಯಾಗುವ ಯತ್ನ ನಡೆಸಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಆರೋಪಿ ಕುಟ್ಟ ಬಳಿಯ ಪೂಚೆಕಲ್ಲು ನಿವಾಸಿ ಅಬ್ದುಲ್ ಅಜೀಜ್ ನನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ, ಪಿಕ್ಅಪ್ನಲ್ಲಿ ಮರದ ದಿಮ್ಮಿ ಇರುವುದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿ ಸಹಿತ ಪಿಕ್ಅಪ್ ವಾಹನವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿಎಫ್ಒ ಜಗನಾಥ್ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಆರ್ಎಫ್ಒ ಶಂಕರ್, ಉಪ ಅರಣ್ಯ ಅಧಿಕಾರಿಗಳಾದ ರಕ್ಷೀತ್, ಮಂಜುನಾಥ್ ಬೆನಕೊಟಗಿ, ಆರ್ಆರ್ಟಿ ತಂಡದ ಸಿಬ್ಬಂದಿಗಳಾದ ಸುರೇಶ್ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
- ಹೆಚ್.ಕೆ.ಜಗದೀಶ್