ಕೂಡಿಗೆ, ಜು. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿಯ ಮುಖ್ಯ ರಸ್ತೆಯ ಅಂಚಿನಲ್ಲಿರುವ ಎರಡು ಕೋಳಿ ಮಾಂಸ ಮಾರಾಟದ ಅಂಗಡಿಗಳ ಮಾಲೀಕರು ಮಾಂಸ ಮಾರಾಟದ ಪರವಾನಗಿಯನ್ನು ಗ್ರಾಮ ಪಂಚಾಯಿತಿಯಿAದ ಪಡೆಯದ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬೀಗ ಜಡಿದ ಘಟನೆ ಕೂಡಿಗೆಯಲ್ಲಿ ನಡೆಯಿತು.

ಕೋಳಿ ಮಾಂಸ ಮಾರಾಟದ ಪರವಾನಗಿ ಅವಧಿ ಕಳೆದ ವಾರಕ್ಕೆ ಮುಕ್ತಾಯವಾದ ವಿಷಯ ಸಾಮಾನ್ಯ ಸಭೆಯಲ್ಲಿ ಚರ್ಚೆ ಆದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಸ್ಥಳೀಯ ಎರಡು ಅಂಗಡಿಗಳಿಗೆ ಬೀಗವನ್ನು ಜಡಿಯಲಾಯಿತು.

ಇದನ್ನು ಮನಗಂಡ ಕೋಳಿ ಮಾಂಸದ ಅಂಗಡಿ ಮಾಲೀಕ ಬಾಕಿ ಉಳಿದ ಹಣವನ್ನು ಗ್ರಾಮ ಪಂಚಾಯಿತಿಗೆ ಪಾವತಿಸಿ ಮರು ಪರವಾನಗಿ ಪಡೆದು ಅಂಗಡಿಗಳನ್ನು ತೆರೆಯಲು ಮುಂದಾಗಿದ್ದಾರೆ.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನಿತ್, ಕರ ವಸೂಲಿಗಾರ ಅನಿಲ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.