ಸೋಮವಾರಪೇಟೆ, ಜು. ೫: ರಾಜ್ಯ ಸರ್ಕಾರವು ನೂತನವಾಗಿ ಪರಿಷ್ಕರಿಸಿರುವ ೯ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣನವರು - ಸಾಂಸ್ಕೃತಿಕ ನಾಯಕ’ ಎಂಬ ಪಾಠದಲ್ಲಿ ವೀರಶೈವ ಎಂಬ ಪದವನ್ನು ತೆಗೆದುಹಾಕಲಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವೀರಶೈವ ಹಾಗೂ ಲಿಂಗಾಯತ ಎಂದು ಒಡಕು ಮೂಡಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಪುನಃ ಅಧಿಕಾರಕ್ಕೆ ಬಂದ ತಕ್ಷಣ ಪಠ್ಯದಲ್ಲಿ ವೀರಶೈವ ಪದವನ್ನು ತೆಗೆಯುವ ಮೂಲಕ ತಮ್ಮ ಒಡೆದು ಆಳುವ ನೀತಿಯನ್ನು ಮುಂದುವರೆಸಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಗಮನಹರಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕೆಂದು ಒತ್ತಾಯಿಸಿರುವ ಮಹೇಶ್, ಅವೈಜ್ಞಾನಿಕ, ಇತಿಹಾಸಕ್ಕೆ ದೂರವಾದ ಮತ್ತು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಬಾರದು ಎಂದು ತಿಳಿಸಿದ್ದಾರೆ. ಆಗಿರುವ ತಪ್ಪನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸಂಘಟನೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.