ಮಡಿಕೇರಿ, ಜು. ೫: ‘ಸರ್ ಕಾಲೇಜಿನಲ್ಲಿ ಶೌಚಾಲಯ ಸರಿಯಿಲ್ಲ, ಆಸ್ಪತ್ರೆಗೆ ತೆರಳಲು, ಅಲ್ಲಿಂದ ಹಿಂದಿರುಗಲು ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ, ಆಟವಾಡೋಣ ಎಂದರೆ ಮೈದಾನವಂತೂ ಇಲ್ಲವೇ ಇಲ್ಲ... ಕುಡಿಯುವ ನೀರಿಗೂ ಅಭಾವ ಉಂಟಾಗಿದೆ. ಸ್ಟೆöÊಪೆಂಡ್ ಸರಿಯಾಗಿ ಕೈ ಸೇರುತ್ತಿಲ್ಲ..’ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಸಚಿವರ ಎದುರೇ ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು.
ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಗೆ (ಮೆಡಿಕಲ್ ಕಾಲೇಜು) ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಸಚಿವರ ಸ್ವಾಗತಕ್ಕೆ ನಿಂತಿದ್ದ ವಿದ್ಯಾರ್ಥಿಗಳತ್ತ ಶಾಸಕ ಮಂತರ್ ಗೌಡ ಜೊತೆಗೆ ತೆರಳಿದ ಸಚಿವರು ಅಲ್ಲಿಯೇ ಸಮಸ್ಯೆ ಕೇಳಲಾ ರಂಭಿಸಿದರು. ಈ ವೇಳೆ ಕಾಲೇಜಿನಲ್ಲಿ ಶೌಚಾಲಯ
(ಮೊದಲ ಪುಟದಿಂದ) ಸೂಕ್ತ ನಿರ್ವಹಣೆಯಾಗುತ್ತಿಲ್ಲ. ಗ್ರಂಥಾಲಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ ಎಂಬ ದೂರುಗಳು ಕೇಳಿ ಬಂದವು.
ನಂತರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳು ಒಂದೊAದೆ ಸಮಸ್ಯೆಗಳನ್ನು ಹೇಳುತ್ತ್ತಾ ಹೋದರು.
ವಸತಿ ನಿಲಯದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಹೊರಗೆ ಬಂದು ಕರೆ ಮಾಡಬೇಕಾದ ಸ್ಥಿತಿ ಇದೆ. ಈ ವ್ಯಾಪ್ತಿಯಲ್ಲಿ ಟವರ್ ನಿರ್ಮಿಸಬೇಕು. ಕ್ರೀಡೆಗಳನ್ನು ಆಡಲು ಮೈದಾನವಿಲ್ಲ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಕಾಲೇಜಿನಲ್ಲಿ ಉತ್ತಮ ಸಭಾಂಗಣವಿಲ್ಲ. ವಸತಿ ನಿಲಯದ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಜಿಲ್ಲಾಸ್ಪತ್ರೆ ಎದುರು ಬಸ್ ತಂಗುದಾಣ ನಿರ್ಮಿಸಬೇಕು. ವಸತಿ ನಿಲಯದಿಂದ ಜಿಲ್ಲಾಸ್ಪತ್ರೆಗೆ ತೆರಳುವ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅದನ್ನು ಕ್ರಮಬದ್ಧಗೊಳಿಸಿ ಸಮಯ ನಿಗದಿಗೊಳಿಸಬೇಕು. ಜೊತೆಗೆ ಮತ್ತೊಂದು ವಾಹನದ ಅವಶ್ಯಕತೆ ಯಿದ್ದು, ಹೊಸ ವಾಹನ ಖರೀದಿಗೆ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟರು.
ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮಾತನಾಡಿ, ವಿದ್ಯಾರ್ಥಿ ಸಂಭಾವನೆ (ಸ್ಟೆöÊಪೆಂಡ್) ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ವಸತಿ ವ್ಯವಸ್ಥೆಯೂ ಇಲ್ಲ ಎಂದು ಗಮನ ಸೆಳೆದರು.
ಪ್ರತಿದಿನ ೨ ಗಂಟೆ ಮಾತ್ರ ಕಾಲೇಜು, ವಸತಿ ನಿಲಯದಲ್ಲಿ ನೀರು ಲಭ್ಯವಾಗುತ್ತದೆ. ವಸತಿ ನಿಲಯದಲ್ಲಿ ವೈದ್ಯಕೀಯ ವ್ಯವಸ್ಥೆ, ಆ್ಯಂಬ್ಯುಲೆನ್ಸ್ ಸೇವೆ ಒದಗಿಸಬೇಕೆಂದು ಭವಿಷ್ಯದ ವೈದ್ಯರು ಒತ್ತಾಯಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳು ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ಕಾಲೇಜು ಕಟ್ಟಡ, ವಸತಿ ನಿಲಯ ನಿರ್ಮಿಸಬೇಕು. ಶಿಕ್ಷಕರ ಕೊರತೆ ನೀಗಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು ಎಂದು ಗಮನ ಸೆಳೆದರು.
ಸಚಿವ ಡಾ. ಶರಣಪ್ರಕಾಶ ಪಾಟೀಲ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಮಾತನಾಡಿ, ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಸಾಮಾರ್ಥ್ಯದ ‘ವೈ-ಫೈ’ ಅಳವಡಿಸಿ, ಮೈದಾನಕ್ಕೆ ಜಾಗದ ಕೊರತೆ ಇದ್ದು, ಅಕ್ಕಪಕ್ಕದಲ್ಲಿ ಗ್ರಾ.ಪಂ. ವ್ಯಾಪ್ತಿಯ ಜಾಗವಿದ್ದರೆ ಗುರುತಿಸಿ ಸದ್ಯಕ್ಕೆ ವಾಲಿಬಾಲ್, ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ. ಅದರೊಂದಿಗೆ ಹೊಸ ಬಸ್ ಖರೀದಿಗೂ ಪ್ರಸ್ತಾವನೆ ಸಲ್ಲಿಸಲು ವೈದ್ಯಕೀಯ ಕಾಲೇಜಿನ ಡೀನ್ಗೆ ಸೂಚಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳು ಸಲ್ಲಿಸಿರುವ ವಸತಿ ನಿಲಯ ನಿರ್ಮಾಣ ಬೇಡಿಕೆ ಕುರಿತು ಚರ್ಚೆ ನಡೆಸಲಾಗುವುದು. ಉಪನ್ಯಾಸಕರ ನೇಮಕಕ್ಕೂ ಕ್ರಮವಹಿಸಲಾಗುವುದು. ಬಸ್ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತ ರಾಥೋಡ್ ಮಾತನಾಡಿ, ಸ್ಟೆöÊಪೆಂಡ್ ಬಿಡುಗಡೆಗೆ ಹಣ ಸರಕಾರದಿಂದ ಬಂದಿರುವುದಿಲ್ಲ. ಜೊತೆಗೆ ತಾಂತ್ರಿಕ ಸಮಸ್ಯೆಯೂ ವಿಳಂಬಕ್ಕೆ ಕಾರಣವಾಗಿದೆ. ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಅವರು, ವಿದ್ಯಾರ್ಥಿಗಳು ಸರಿಯಾಗಿ ಬಿಲ್ ನೀಡಬೇಕೆಂದು ತಿಳಿಸಿದರು.
ಇದೇ ಸಂದರ್ಭ ಕಾಲೇಜಿನ ಸಿಬ್ಬಂದಿ ವೇತನ ಹೆಚ್ಚಳ ಮಾಡಬೇಕು. ಹೊರ ಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ಸಂದಾಯವಾಗುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಚಿವರನ್ನು ಕೋರಿದರು.
ಸ್ನಾತಕೋತ್ತರ ಪದವಿ ಸೀಟ್ ಹೆಚ್ಚಳಕ್ಕೆ ಕ್ರಮ
ರಾಜ್ಯದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿ.ಜಿ.) ಸೀಟ್ಗಳ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಾಗುತ್ತದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಜಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರಕಾರಿ ಕೋಟಾ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಸಾವಿರ ಸೀಟ್ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಕಾಲೇಜಿನ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಇಂಜಿನಿಯರ್ ಪವಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಸೇರಿದಂತೆ, ಇನ್ನಿತರರು ಹಾಜರಿದ್ದರು.