ವೀರಾಜಪೇಟೆ, ಜು. ೫: ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ೫೦ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ತಾ. ೯ ರಂದು ವಿವಿಧ ಕಾರ್ಯಕ್ರಮ ಹಾಗೂ ಪುರಸಭೆ ಸೇರಿದಂತೆ ೫೮ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಲ ಕೊಡಗು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹೇಳಿದರು.

ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೯ರಂದು ಬೆಳಿಗ್ಗೆ ೭ ಗಂಟೆಗೆ ತಲಕಾವೇರಿ ಸನಿಧಾನದಲ್ಲಿ ಪೂಜೆಯೊಂದಿಗೆ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ೯.೧೫ ಕ್ಕೆ ಭಾಗಮಂಡಲದ ಭಗಂಡೇಶ್ವರ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪ, ಜೀವ ಹಾನಿಗಳಾಗದಿರಲಿ ಎಂದು ಜನಜಾನುವಾರುಗಳ ಸಮೃದ್ಧಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ನಡೆಯಲಿದೆ.

ನಂತರ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹತ್ಮಾಗಾಂಧಿಯವರ ಪರಿಕಲ್ಪನೆಯ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಹಾಗೆಯೇ ಎಲ್ಲಾ ೫೮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಆಂದೋಲನಕ್ಕೆ ಏಕಕಾಲದಲ್ಲಿ ಚಾಲನೆ ದೊರೆಯಲಿದೆ ಎಂದರು.

ಬಳಿಕ ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ಕೂರ್ಗ್ ಎಥನಿಕ್ ಹಾಲ್‌ನಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಶಿಬಿರ ನಡೆಯಲಿದೆ. ಅಪರಾಹ್ನ ೧೨ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಸಾರ್ವಜನಿಕರು ಭಾಗವಹಿಸಲಿದ್ದಾರೆ.

(ಮೊದಲ ಪುಟದಿಂದ) ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮನೆ ಇದ್ದು ಮನೆ ಮೇಲೆ ಚಾವಣಿ ಇಲ್ಲದ ಟಾರ್ಪಲ್ ಇರುವ ೧೨೦ ಕುಟುಂಬಕ್ಕೆ ಶೀಟ್‌ಗಳ ವಿತರಣೆ ನಡೆಯಲಿದೆ.

ಇದೇ ಸಂದರ್ಭ ಎಎಸ್‌ಪಿ ಅಸೋಸಿಯೇಟ್ ವತಿಯಿಂದ ವೀರಾಜಪೇಟೆ ಸರಕಾರಿ ಆಸ್ವತ್ರೆಗೆ ಅಗತ್ಯ ಉಪಕರಣ ಖರೀದಿಸಲು ರೂ. ೫ ಲಕ್ಷಗಳನ್ನು ನೀಡಲಾಗುತ್ತದೆ. ಅಪರಾಹ್ನ ೧.೩೦ ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ ನಾಲ್ಕು ಗಂಟೆಗೆ ಶಾಸಕರು ಗೋಣಿಕೊಪ್ಪದ ಕೀರೆಹೊಳೆ ದಂಡೆಯಲ್ಲಿ ಪರಿಸರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿಧ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ಕ್ಕೆ ಪಾಲಿಬೆಟ್ಟದ ವಿಶೇಷಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ ಎಂದು ರಂಜಿ ಪೂಣಚ್ಚ ಹೇಳಿದರು.

ವೀರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ; ಶಾಸಕರ ಬಹುದಿನಗಳ ಕನಸಾದ ಸ್ವಚ್ಛತೆಯ ಪರಿಕಲ್ಪನೆಗೆ ಪೂರಕವಾಗಿ ಆ ದಿನ ನಿರ್ಮಲ ಕೊಡಗು ಅಭಿಯಾನಕ್ಕೆ ಪುರಸಭೆ ಸೇರಿದಂತೆ ೫೮ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಾಲನೆ ದೊರಯಲಿದ್ದು, ಇದು ನಿರಂತರವಾಗಿ ನಡೆಯಲಿದೆ. ಜೊತೆಗೆ ಪುರಸಭೆ, ಗ್ರಾ.ಪಂ.ನಲ್ಲಿ ಈ ಅಭಿಯಾನ ಒಮ್ಮೆಲೆ ಚಾಲನೆ ಪಡೆಯಲಿರುವುದು ಐತಿಹಾಸಿಕ ಕ್ಷಣವಾಗಲಿದೆ.

ಆರೋಗ್ಯ ಶಿಬಿರದಲ್ಲಿ ಮಡಿಕೇರಿಯ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ರಕ್ತದಾನ ಶಿಬಿರ, ಮಧುಮೇಹ ಪರೀಕ್ಷೆ ರಕ್ತಒತ್ತಡ ಸಮಸ್ಯೆ, ಕೀಲು ಮತ್ತು ಮೂಳೆ ತಜ್ಞರು, ಹೃದಯ ತಜ್ಷರು, ಇಕೋ ಪರೀಕ್ಷೆ, ಇಸಿಜಿ ಪರೀಕ್ಷೆ, ಕಣ್ಣಿನ ತಪಾಸಣೆ ಹಿರಿಯರಿಗೆ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಪರೀಕ್ಷೆಗೆ ಅವಕಾಶ ಇದ್ದು ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಸತೀಶ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಆರ್.ಕೆ. ಸಲಾಂ, ವೀರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು ಉಪಸ್ಥಿತರಿದ್ದರು.