ಮಡಿಕೇರಿ, ಜು.೫: ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಾಪೋಕ್ಲು ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದ ನಿವಾಸಿ ದಿ. ಕರ್ಣಯ್ಯನ ಉತ್ತಪ್ಪ ಅವರ ಪತ್ನಿ ರಾಧಾ (೭೪) ಎಂಬವರನ್ನು ಮನೆಗೆ ನುಗ್ಗಿ ಹತ್ಯೆ ಮಾಡಿದ್ದ ಈರ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ದೋಚಿದ್ದ ಆಭರಣ ಮಾರಾಟ ಮಾಡಲು ಸಹಕರಿಸಿದ್ದ ಮಹಿಳೆಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಕಳೆದ ತಾ.೨೧-೦೨-೨೦೧೯ರಂದು ಸಂಜೆ ರಾಧಾ ಅವರ ಮನೆಗೆ ಆಗಮಿಸಿದ್ದ, ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರಾದ ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿಯ ಸುಬ್ರಮಣ್ಯ (ಮಣಿ), ಮುಳ್ಳುಸೋಗೆ ಜನತಾ ಕಾಲೋನಿ ನಿವಾಸಿ ಮದನ್ ಅವರುಗಳು ಹಣದ ಆಸೆಗಾಗಿ ರಾಧಾ ಅವರ ಕತ್ತು ಹಿಸುಕಿ ಕೊಲೆ ಮಾಡಿ ಹಣ ಸಿಗದಿದ್ದರಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಏಳು ದಿನಗಳ ಅವಧಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂದಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಏನಿದು ಘಟನೆ..?

ಹತ್ಯೆಯಾಗಿರುವ ರಾಧಾ ಅವರಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗ ಧನಪಾಲ್ ಮೈಸೂರಿನಲ್ಲಿ ಕೆಲಸದ ನಿಮಿತ್ತ ವಾಸವಾಗಿದ್ದಾರೆ. ಮಗಳನ್ನು ವಿವಾಹ ಮಾಡಿಕೊಡಲಾಗಿದೆ. ಮಗಳು ಇವರ ಮನೆಯಿಂದ ೨ ಕಿ.ಮೀ ದೂರದಲ್ಲಿ ವಾಸವಾಗಿದ್ದಾರೆ. ಮೂರನೇ ಮಗ ನಂದಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದು, ರಾಧಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ೨೦೧೯ರ ಫೆ ೨೨ರಂದು ಬೆಳಿಗ್ಗೆ ಮಗ ನಂದಕುಮಾರ್

(ಮೊದಲ ಪುಟದಿಂದ) ತಮ್ಮ ತಾಯಿಗೆ ಮೊಬೈಲ್ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಗೆ ಈ ಬಗ್ಗೆ ತಿಳಿಸಿದ್ದಾರೆ. ಪಕ್ಕದ ಮನೆ ಲೀಲಾವತಿ ತನ್ನ ಮೈದುನ ಚಿದಾನಂದ ಮೂಲಕ ರಾಧಾ ಮಗಳು ಜಾನ್ಸಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಆ ಮೇರೆಗೆ ಬಂದು ನೋಡಲಾಗಿ ಮನೆ ಮುಂಬಾಗಿಲು ಮುಚ್ಚಿದ್ದು, ಹಿಂಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯ ಮಂಚದ ಮೇಲೆ ರಾಧಾ ಮಲಗಿದ್ದಲ್ಲೇ ಶವವಾಗಿದ್ದು, ಮೂಗಿನಿಂದ ರಕ್ತ ಬರುತ್ತಿರುವುದು ಗೋಚರಿಸಿದೆ. ಕೋಣೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ಮೃತೆಯ ಅಳಿಯ ಹೊದವಾಡ ಗ್ರಾ. ಪಂ. ಅಧ್ಯಕ್ಷರಾಗಿದ್ದ ಕುಲ್ಲಚಂಡ ದಿನೇಶ್ ದೂರು ನೀಡಿದ್ದು, ಸ್ಥಳಕ್ಕೆ ಆಗಿನ ಡಿವೈಎಸ್‌ಪಿ ಸುಂದರ್‌ರಾಜ್, ಮಡಿಕೇರಿ ವೃತ್ತನಿರೀಕ್ಷಕ ಸಿದ್ದಯ್ಯ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ನಂಬಿಕಸ್ತ ಕಾರ್ಮಿಕರಿಂದಲೇ ಕೊಲೆ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರ ತನಿಖಾ ತಂಡ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ಅವರ ಮಾರ್ಗದರ್ಶನದಲ್ಲಿ ಮಹಿಳೆ ಸೇರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕುತೂಹಲವೆಂದರೆ ಕೆಲಸ ನೀಡಿ, ಆಶ್ರಯ ಕಲ್ಪಿಸಿದ್ದ ಮನೆಯಾಕೆಯನ್ನೇ ಹತ್ಯೆ ಮಾಡಲು ಸಂಚು ಹೂಡಿದ್ದ ಆರೋಪಿಗಳು ಅದು ಸಾಧ್ಯವಾಗದ್ದರಿಂದ ಮತ್ತೊಂದು ಕಡೆಯಲ್ಲಿ ಕೆಲಸ ನೀಡಿದ ಸಾಧುಜೀವಿಯನ್ನು ಕೊಂದಿರುವ ವಿಚಾರ ಕೊಲೆಗಡುಕರಿಂದಲೇ ತಿಳಿದು ಬಂದಿದೆ.

ಕಗ್ಗೋಡ್ಲುವಿನ ಸಣ್ಣ ಬೆಳೆಗಾರರಾದ ಪುಳಂಜನ ಶೋಭ ಅವರಲ್ಲಿಗೆ ಕುಶಾಲನಗರ ಅಸುಪಾಸಿನ ಕೆಲವು ಕಾರ್ಮಿಕರು ಬಂದು ಸೇರಿಕೊಂಡಿದ್ದರು.ಅವರಿಗೆ ಶೋಭಾ ಅವರು ತಮ್ಮ ಲೈನ್‌ಮನೆಯಲ್ಲಿ ತಂಗಲು ಅವಕಾಶ ಕಲ್ಪಿಸಿದ್ದರು. ಇವರುಗಳ ಪೈಕಿ ಸುಬ್ರಮಣ್ಯ (ಮಣಿ), ಆತನ ಸಹೋದರಿ ಕಾವ್ಯ ಹಾಗೂ ಇನ್ನೊಬ್ಬ ಯುವಕ ಮದನ್ ಶೋಭಾ ಅವರಿಗೆ ನಂಬಿಕಸ್ತ ಹಾಗೂ ಒಳ್ಳೆಯ ಕೆಲಸಗಾರಾಗಿದ್ದರು. ತಮ್ಮ ತೋಟದ ಕೆಲಸ ಮುಗಿದಾದ ಮೇಲೆ ಶೋಭಾ ಅವರು ಈ ಮೂವರನ್ನು ಅವರ ಸಂಬAಧಿ ಕರ್ಣಯ್ಯನ ರಾಧ ಅವರ ಮನೆಗೆ ಕಾಫಿ ಕುಯ್ಲು ಕೆಲಸಕ್ಕೆ ಕಳುಹಿಸಿಕೊಟ್ಟಿದ್ದರು.

ರಾಧ ಅವರ ತೋಟದಲ್ಲಿ ಸ್ವಲ್ಪ ಮಾತ್ರ ಕಾಫಿ ಕೆಲಸ ಇದ್ದುದರಿಂದ ಕೆಲಸ ಬೇಗನೇ ಮುಗಿಸಿದ್ದಾರೆ. ರಾಧ ಅವರೂ ಕೂಡ ಈ ಕಾರ್ಮಿಕರೊಳಗಿನ ರಾಕ್ಷಸಿ ಗುಣವನ್ನು ಗಮನಿಸದೆ ಒಳ್ಳೆಯ ಕೆಲಸಗಾರರೆಂದು ನಂಬಿದ್ದರು. ಅವರಿಗಿಂತ ಅವರ ಮಕ್ಕಳು ಸೊಸೆಯಂದಿರು ಕೂಡ ಹೆಚ್ಚಾಗಿ ನಂಬಿದ್ದರು. ಶೋಭಾ ಅವರಿಗೆ ಒಂದಿಷ್ಟು ತೋಟವಿದ್ದು, ಆದಾಯವಿದೆ. ಹಾಗಾಗಿ ಈ ಮೂವರು ಶೋಭಾ ಅವರ ಹಣ, ಚಿನ್ನಾಭರಣ ದೋಚಿ ಅವರನ್ನು ಮುಗಿಸಲು ಪ್ಲಾö್ಯನ್ ಮಾಡಿದ್ದರು. ಆದರೆ, ಕಗ್ಗೋಡ್ಲುವಿನಲ್ಲಿ ಅಸುಪಾಸಿನಲ್ಲಿ ಮನೆ, ಲೈನ್‌ಮನೆಗಳಿದ್ದುದರಿಂದ ಅವರ ಪ್ಲಾö್ಯನ್ ಸಕ್ಸಲ್ ಆಗಲಿಲ್ಲ..!

ಶೋಭಾ ಅವರನ್ನು ಏನೂ ಮಾಡಲಾಗದೆಂದು ತಿಳಿದ ಪಾತಕಿಗಳ ದೃಷ್ಟಿ ನೆಟ್ಟಿದ್ದು, ಬಡಪಾಯಿ ರಾಧ ಅವರ ಕಡೆಗೆ! ಅಂದು ಗುರುವಾರ, ಆ ದಿನ ಸಂಜೆ ರಾಧ ಅವರು ಸೊಸೈಟಿಗೆ ಹೋಗಿ ಸೀಮೆ ಎಣ್ಣೆ ತಗೊಂಡು ಮನೆಗೆ ಬಂದಿದ್ದಾರೆ. ಮನೆಯಲ್ಲಿ ನೋಡುವಾಗ ಈ ಮೂವರು ಕಾರ್ಮಿಕರು ಇದ್ದಾರೆ. ‘ನೀವೇನು ಬಂದಿದ್ದು..?’ ಎಂದು ಸಹಜವಾಗಿಯೇ ರಾಧಮ್ಮ ಕೇಳಿದ್ದಾರೆ. ‘ಕೆಲಸ ಎಲ್ಲಾ ಮುಗೀತು, ನಾವು ಊರಿಗೆ ಹೋಗುತ್ತಿದ್ದೇವೆ. ನಿಮ್ಮನ್ನ ನೋಡಿ ಮಾತನಾಡಿಸಿಕೊಂಡು ಹೋಗಲೆಂದು ಬಂದಿದ್ದು,’ ಅಂತ ಇವರು ಹೇಳಿದ್ದಾರೆ. ರಾಧರಿಗೆ ಇವರ ಮಾತಿನಿಂದ ಸಂತೋಷವಾಗಿದೆ, ಅವರು ‘ಕುಡಿಯಲು ನೀರು ಕೊಡಿ’ ಅಂತ ಕೇಳಿದ್ದಾರೆ. ‘ಅಯ್ಯೋ ನೀರು ಯಾಕೆ, ಇಷ್ಟು ದೂರ ಬಂದಿದ್ದೀರಾ, ಇರಿ ಕಾಫಿ ಮಾಡಿಕೊಡುತ್ತೇನೆ’ ಎಂದು ಆ ಅಮ್ಮ ಮನೆಯೊಳಗೆ ಹೋಗಿದ್ದಾರೆ. ಕಾಫಿ ಮಾಡಿಕೊಟ್ಟ ತಪ್ಪಿಗೆ ಈ ಪಾಪಿಗಳು ಅಮ್ಮನ ಉಸಿರು ಕಸಿದಿದ್ದಾರೆ..!

ಶೋಭಾ ಅವರಲ್ಲಿ ದೋಚಲಾಗದೇ ಇದ್ದಾಗ ಈ ಪಾಪಿಗಳ ಚಿತ್ತ ಹರಿದಿದ್ದು ರಾಧ ಅವರು ಕಾಫಿ ಮಾರಿದ ಹಣದ ಮೇಲೆ. ಇವರುಗಳೇ ಕುಯ್ದ ಕಾಫಿಯನ್ನು ರಾಧ ಅವರು ರೂ. ೨ ಲಕ್ಷಕ್ಕೆ ಮಾರಾಟ ಮಾಡಿದ್ದರು. ಆದರೆ, ಹಣವನ್ನು ಮನೆಯಲ್ಲಿಡದೆ ಅವರ ದ್ವಿತೀಯ ಪುತ್ರ ಅದನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಸಿದ್ದರು. ಇದು ಈ ಕೊಲೆಗಡುಕರಿಗೆ ಗೊತ್ತಿರಲಿಲ್ಲ. ಎರಡು ಲಕ್ಷ ಹಣ ಹಾಗೂ ರಾಧ ಅವರ ಬಳಿಯಿರುವ ಚಿನ್ನಾಭರಣ ದೋಚುವ ನಿಟ್ಟಿನಲ್ಲಿ ಇವರುಗಳು ಸ್ಕೆಚ್ ಹಾಕಿದ್ದರು.

ಕೊಲ್ಲದಿರಿ ಎಂದಿದ್ದರು..!

ಮನೆ ಒಳನುಗ್ಗಿದಾಗಲೇ ರಾಧ ಅವರ ಬಾಯಿಯನ್ನು ಮುಚ್ಚಿ ಹಣ ಹಾಗೂ ಚಿನ್ನಕ್ಕೆ ಬೇಡಿಕೆಯಿಟ್ಟ ಕಲ್ಲು ಹೃದಯದವರಿಗೆ ರಾಧ ಅವರೇ ತಮ್ಮ ಬಳಿಯಿದ್ದ ಒಡವೆಗಳನ್ನು ಬಿಚ್ಚಿ ಕೊಟ್ಟಿದ್ದಾರೆ, ಬೀರೂವಿನಲ್ಲಿದ್ದ ಒಡವೆಗಳನ್ನು ಕೊಟ್ಟಿದ್ದಾರೆ. ‘ನನ್ನನ್ನೇನು ಮಾಡಬೇಡಿ, ಎಲ್ಲವನ್ನೂ ತಕೊಂಡೋಗಿ ನನ್ನನ್ನೇನು ಮಾಡಬೇಡಿ, ಯಾರಿಗೂ ಹೇಳಲ್ಲ’ ಅಂತ ಆ ಅಮ್ಮ ಅಂಗಲಾಚಿದರAತೆ, ಆದರೆ ಕಲ್ಲು ಹೃದಯಗಳಿಗೆ ಕೇಳಬೇಕಲ್ಲ, ಒಬ್ಬ ಅಮ್ಮನ ಕೈ ಹಿಡಿದುಕೊಂಡರೆ ಮತ್ತೊಬ್ಬ ಕುತ್ತಿಗೆ ಹಿಚುಕಿ ಸಾಯಿಸಿದನಂತೆ. ಸೆರೆ ಸಿಕ್ಕ ಮೇಲೆ ಸಾಯಿಸಿದ್ದೇಕೆ ಅಂತ ಪೊಲೀಸರು, ಗ್ರಾಮಸ್ಥರು ಕೇಳಿದಾಗ ‘ನಾವೇ ಮಾಡಿದೂಂತಾ ಅಮ್ಮ ಹೇಳಿಬಿಟ್ಟರೆ ಎಂಬ ಹೆದರಿಕೆಯಿಂದ’ ಅಂತ ಪೊಲೀಸರಿಗೆ ಹೇಳಿಕೆ ನೀಡಿದ್ದರು ಪಾಪಿಗಳು.

ಸಿಕ್ಕಿದ್ಹೇಗೆ..?

ಫೆ. ೨೧ ರಂದೇ ಕೊಲೆಯಾಗಿದ್ದರೂ ಗೊತ್ತಾಗಿದ್ದು, ೨೩ ರಂದು. ಸಾಮಾನ್ಯ ಸಾವು ಅಲ್ಲ ಇದೊಂದು ಕೊಲೆ ಎಂಬ ಸಂಶಯ ಎಲ್ಲರಲ್ಲೂ ಮೂಡಿತ್ತು. ಅದರಲ್ಲೂ ಬಲವಾದ ಸಂಶಯ ಮೂಡಿದ್ದು, ಶೋಭಾ ಅವರ ಮಗನಿಗೆ. ತಾ. ೨೧ ರಂದು ಈ ಮೂವರು ತಡರಾತ್ರಿ ಮನೆಗೆ ಬಂದಿದ್ದು, ನಂತರ ಮರುದಿನವೇ ಲೈನ್‌ಮನೆ ಖಾಲಿ ಮಾಡಿ ಹೋಗಿದ್ದನ್ನು ಗಮನಿಸಿದ ಅವರು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ಇದರ ಜಾಡನ್ನು ಹಿಡಿದ ಪೊಲೀಸರ ತನಿಖಾ ತಂಡ ಈ ಮೂವರನ್ನು ಮೈಸೂರಿನಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಶಾಂತಿ ಜಿ. ಅವರು ಸಾಕ್ಯಾಧಾರಗಳ ಮೂಲಕ ಕೊಲೆ ಮಾಡಿರುವದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿ ಆಭರಣ ದೋಚಿದ ಸುಬ್ರಮಣ್ಯ ಹಾಗೂ ಮದನ್ ಅವರುಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಹಾಗೂ ಆಭರಣಗಳನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಸಹಕರಿಸಿದ ಕಾವ್ಯಳಿಗೆ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರ ಸರಕಾರಿ ಅಭಿಯೋಜಕ ಎನ್.ಪಿ.ದೇವೇಂದ್ರ ವಾದ ಮಂಡಿಸಿದ್ದರು.

? ಕುಡೆಕಲ್ ಸಂತೋಷ್