ನಾಪೋಕ್ಲು, ಜು. ೬: ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಕಾಡಿನೊಳಗೆ ನಿರಂತರ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಚೆಯ್ಯAಡಾಣೆ, ನರಿಯಂದಡ, ಚೇಲಾವರ, ಕೋಕೇರಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕೃಷಿಕರ ಫಸಲು ನಷ್ಟವಾಗುತ್ತಿವೆ. ಗ್ರಾಮದ ಪೊಕ್ಕೋಳಂಡ್ರ, ಕೋಡಿಮಣಿಯಂಡ, ಬೊವ್ವೇರಿಯಂಡ, ಬಿಳಿಯಂಡ್ರ, ಮಕ್ಕಿಮನೆ, ಮಂಞAಡ್ರ, ನೆಲ್ಲಮಕ್ಕಡ, ಮುಂಡ್ಯೋಳAಡ ಅವರ ತೋಟದಲ್ಲಿ ಕಾಡಾನೆಗಳ ಹಿಂಡು ಕೃಷಿ ಫಸಲನ್ನು ತಿಂದು ಧ್ವಂಸಗೊಳಿಸಿವೆ. ತೋಟದಲ್ಲಿ ಬೆಳೆಸಲಾದ ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಇಲ್ಲಿನ ಸುಮಾರು ೨ ಎಕರೆ ಕೃಷಿ ಪ್ರದೇಶದಲ್ಲಿ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡಲು ಮುಂದಾಗಿದ್ದು, ಕಾಡಾನೆಗಳು ಸಿಬ್ಬಂದಿಗಳ ಕಣ್ಣಿಗೆ ಮಣ್ಣೆರಚ್ಚುತ್ತಿವೆ. ಪದೇ ಪದೇ ದಾಳಿ ಮಾಡಿ ತೊಂದರೆ ನೀಡುತ್ತಿವೆ ಎಂದು ನರಿಯಂದಡ ಗ್ರಾಮಸ್ಥ ಪೊಕ್ಕೋಳಂಡ್ರ ಧನೋಜ್ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು .ಕಾಡಾನೆಗಳನ್ನು ಕಾಡಿಗೆ ಅಟ್ಟುವುದರೊಂದಿಗೆ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಸುವಂತಾಗ ಬೇಕು ಎಂದು ಒತ್ತಾಯಿಸಿರುವ ಗ್ರಾಮಸ್ಥರು ತಾ. ೧೦ ರಂದು ಚೆಯ್ಯಂಡಾಣೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಎಫ್‌ಓ ಜಗನ್ನಾಥ್ ಕಾಡಾನೆಗಳ ದಾಂಧಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರತಿಭಟನೆ ಕೈ ಬಿಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. -ದುಗ್ಗಳ