ಕುಶಾಲನಗರ, ಜು.೫: ದಕ್ಷಿಣ ಭಾರತದ ಜೀವನದಿ ಕಾವೇರಿ ನದಿ ನೀರು ಮಲಿನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ೯ ಮಂದಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ.

ಕಾವೇರಿ ನದಿ ನೀರು ಮಲಿನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುರ್ತು ಮಾರ್ಗೋಪಾಯಗಳನ್ನು ಕಂಡು ಹಿಡಿಯಲು ಅಗತ್ಯವಿರುವ ವರದಿಯನ್ನು ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ನದಿಗೆ ಘನ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಕಲುಷಿತ ನೀರು ಸೇರ್ಪಡೆಯಿಂದ ನೀರು ಸಂಪೂರ್ಣವಾಗಿ ನೈಸರ್ಗಿಕ ಗುಣ ಕಳೆದುಕೊಂಡು ಮಾಲಿನ್ಯ ಉಂಟಾಗುತ್ತಿದೆ. ನಾಗರಿಕರು ಮತ್ತು ಜಲಚರಗಳ ಮೇಲೆ ಇದು ಸಂಪೂರ್ಣ ದುಷ್ಪರಿಣಾಮ ಮಾಡುತ್ತಿದೆ ಎಂಬ ಬಗ್ಗೆ ಮಂಡ್ಯ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮ ಕೈಗೊಂಡಿದೆ.

ತಕ್ಷಣವೇ ತುರ್ತು ಕ್ರಿಯಾಯೋಜನೆ ರೂಪಿಸಲು ಸಂಬAಧಪಟ್ಟ ಇಲಾಖೆಗಳ ತಜ್ಞರನ್ನು ಒಳಗೊಂಡ ಸಮಿತಿಯನ್ನು ಸರಕಾರ ಈಗಾಗಲೇ ರಚಿಸಿದ್ದು ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದೆ.

ಈ ಸಂಬAಧ ಅರಣ್ಯ ಜೀವಶಾಸ್ತç ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ, ದಿನೇಶ್ ಗೂಳಿಗೌಡ ಅವರಿಗೆ ಪತ್ರ ಬರೆದಿದ್ದು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇರೆಗೆ ಸಂಬAಧಪಟ್ಟ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿ, ಸಮಿತಿಗೆ ಎರಡು ವಾರದಲ್ಲಿ ವಿಸ್ತಾರವಾದ ವರದಿಯನ್ನು ಸಲ್ಲಿಸಲು ಸರ್ಕಾರ ಆದೇಶ ನೀಡಿದೆ.

ಈ ಸಂಬAಧ ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಜೀವನದಿ ಕಾವೇರಿ ಮೂಲದಿಂದಲೇ ಕಲುಷಿತಗೊಂಡು ಪರಿಸರಕ್ಕೆ ಅನಾಹುತ ಉಂಟಾಗುತ್ತಿದೆ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮುಖಾಂತರ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಮೂಲದಿಂದಲೇ ಕಾವೇರಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಪತ್ರಿಕೆ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೂಡ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಿದ್ದರು. ಇದರೊಂದಿಗೆ ಮಂಡ್ಯ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೂಡ ಸರ್ಕಾರಕ್ಕೆ ಪತ್ರ ಬರೆದು ಕಾವೇರಿ ನದಿಯ ಸಂರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಸಮಿತಿಯಲ್ಲಿ ಯಾರಿದ್ದಾರೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಬೆಂಗಳೂರು) ಮುಖ್ಯ ಪರಿಸರ ಅಧಿಕಾರಿ ನಿರಂಜನ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿ ಕಾವೇರಿ ನೀರಾವರಿ ನಿಗಮ ನಿಯಮಿತದ (ಮೈಸೂರು) ಅಧೀಕ್ಷಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಮೈಸೂರು) ಯ ಅಧೀಕ್ಷಕ ಅಭಿಯಂತರರು, ಮೈಸೂರು ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರರು, ಮೈಸೂರು ವಿಶ್ವವಿದ್ಯಾನಿಲಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥರು, ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿAಗ್ ಕಾಲೇಜ್ ಆಫ್ ಮೈಸೂರಿನ ಪ್ರಾಧ್ಯಾಪಕ ಡಾ. ಬಿ. ಮನೋಜ್ ಕುಮಾರ್, ಮೈಸೂರಿನ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು, ಮೈಸೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ಪರಿಸರ ಅಧಿಕಾರಿ ಎಂ.ಬಿ. ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಇದೇ ರೀತಿ ಮೈಸೂರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮೈಸೂರು ಹಿರಿಯ ಪರಿಸರ ಅಧಿಕಾರಿಯನ್ನು ಸದಸ್ಯ ಸಂಯೋಜಕರಾಗಿ ನೇಮಕ ಮಾಡಲಾಗಿದೆ. -ಚಂದ್ರಮೋಹನ್