ಸೋಮವಾರಪೇಟೆ, ಜು.೬ : ದಿನೇ ದಿನೇ ವ್ಯಾಪಿಸುತ್ತಿರುವ ಡೆಂಗ್ಯೂ ಹಾಗೂ ಚಿಕುನ್‌ಗುನಿಯಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಡೆಂಗ್ಯೂವನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ಸ್ಥಾನವನ್ನು ನಾಶಗೊಳಿಸುವ ಬಗ್ಗೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಅರಿವು ಮೂಡಿಸಲಾಯಿತು. ಸೊಳ್ಳೆಗಳ ಉಗಮವನ್ನು ತಡೆಗಟ್ಟುವುದು ಹಾಗೂ ಸುತ್ತಮುತ್ತಲ ವಾತಾವರಣವನ್ನು ಶುಚಿಯಾಗಿಟ್ಟು ಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪಟ್ಟಣ ಪಂಚಾಯಿತಿಯ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯ ಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಚೆರುವಂಡ ನಾಚಪ್ಪ, ಆರೋಗ್ಯಾಧಿಕಾರಿ ಜಾಸೀಂ ಖಾನ್, ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ಮಹೇಶ್, ಪ್ರವೀಣ್, ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.