ಮಡಿಕೇರಿ, ಜು. ೫: ಸಿನಿಮಾ ಎಂಬ ಬಣ್ಣದ ಲೋಕ ಸದಾ ಸುದ್ದಿಯಲ್ಲಿರುತ್ತದೆ, ರಾಜಕೀಯ ಹೊರತುಪಡಿಸಿದಂತೆ ಹೆಚ್ಚು ಸುದ್ದಿಯಲ್ಲಿರುವುದೇ ಸಿನಿಮಾ ರಂಗದ ಕಲಾವಿದರು, ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮಂದಿ ಒಳ್ಳೆಯ ಕಾರಣದಿಂದ ಸುದ್ದಿಯಾಗುತ್ತಿಲ್ಲ. ವಿವಾದಗಳಿಂದಾಗಿಯೇ ಈ ಕಲಾವಿದರು ಸುದ್ದಿಯ ಕೇಂದ್ರವಾಗುತ್ತಿದ್ದಾರೆ. ಸಿನಿಮಾದಲ್ಲಿ ತಾವು ಮನಸ್ಸಾರೆ ಆರಾಧಿಸುತ್ತಿದ್ದ ನಟ, ನಟಿಯರು ಇವರೇನಾ? ಎಂಬ ಜಿಗುಪ್ಸೆಯ ಭಾವನೆಗಳಿಗೆ ಕಾರಣರಾಗುತ್ತಿದ್ದಾರೆ.

ಕಳೆದ ೫-೬ ವರ್ಷಗಳಿಂದ ಸೋಲಿನ ಸುಳಿಯಲ್ಲಿ ಸಿಲುಕುತ್ತಾ, ಸತತ ನಷ್ಟ ಅನುಭವಿಸುತ್ತಾ ಕಳೆಗುಂದುತ್ತಾ ಸಾಗುತ್ತಿದ್ದ ಕನ್ನಡ ಚಿತ್ರರಂಗವAತೂ ಈಗ ಬಸವಳಿದು ಬಿಟ್ಟಿದೆ. ಕಲಾವಿದರ ವಿವಾದಗಳಿಂದಾಗಿ ಚಿತ್ರರಂಗದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿರುವ ಪ್ರೇಕ್ಷಕರು ಒಂದೆಡೆಯಾದರೆ, ಗೆಲುವಿನ ಸಿಹಿ ಕಾಣದ ಸೋಲಿನ ಕಹಿ ಎದುರಿಸುತ್ತಿರುವ ಸಿನಿಮಾ ಉದ್ಯಮ ಬಂಡವಾಳದಾರರನ್ನು ಈ ಕ್ಷೇತ್ರದಿಂದ ದೂರ ಉಳಿಯುವಂತೆ ಮಾಡಿದೆ.

ಸಿನಿಮಾದ ಅಂತ್ಯದಲ್ಲಿ ಕಾಣುವ ‘ಶುಭಂ’ ಎಂಬ ಹೆಸರು ಸಿನಿಮಾ ರಂಗಕ್ಕೆ ಈಗ ಅಂತ್ಯದAತೆ ಕಾಣುತ್ತಿದೆ. ‘ಪಿಕ್ಟರ್ ಅಭೀ ಬಾಕಿ ಹೈ’ ಎಂಬ ಭರವಸೆಗೆ ಕಾರಣವಾಗಬೇಕಾಗಿದ್ದ ಸಿನಿಮೋದ್ಯಮ ಈಗ ಪಿಕ್ಚರ್ ಕಥೆ ಮುಗಿಯಿತು ಎಂಬ ಕಳವಳಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ೧೯೯೦ ರ ಅವಧಿಯಲ್ಲಿ ೧೨೦೦ ಚಿತ್ರಮಂದಿರಗಳಿದ್ದವು, ಯಾವಾಗ ೨೦೧೫ರ ನಂತರ ರಾಜ್ಯದಲ್ಲಿ ಗಣನೀಯವಾಗಿ ಮಲ್ಟಿಪ್ಲೆಕ್ಸ್ಗಳು ಅಬ್ಬರಿಸಿದವೋ ಅಲ್ಲಿಗೆ ಏಕಪರದೆಯ ಚಿತ್ರಮಂದಿರಗಳು ಆಕರ್ಷಣೆ ಕಳೆದುಕೊಳ್ಳತೊಡಗಿದವು. ಇದೇ ಸಂದರ್ಭ ೨೦೨೦-೨೧ ರಲ್ಲಿ ಕೋವಿಡ್ ಮಹಾಮಾರಿಯ ಆಕ್ರಮಣವಾದ ಬಳಿಕ ಜನರೂ ಕೂಡ ಚಿತ್ರಮಂದಿರಗಳತ್ತ ಬರಲು ಆಸಕ್ತಿ ತೋರಲಿಲ್ಲ. ಮನೆಯಲ್ಲಿ ಕುಳಿತು ಕೆಲಸ ಕಾರ್ಯನಿರ್ವಹಿಸಿದಂತೆಯೇ ಓಟಿಟಿ ಮೂಲಕ ಮನೆಯ ಟಿವಿಯಲ್ಲಿಯೇ ಸಿನಿಮಾ ವೀಕ್ಷಣೆಗೆ ಮುಂದಾದರು. ಇದರ ಪರಿಣಾಮವೇ ಕಳೆದ ೪ ವರ್ಷಗಳಲ್ಲಿ ರಾಜ್ಯದಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಅಥವಾ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ಹಾಕಲಾಗದೇ ಮಂದಿರಗಳೇ ಬಿಕೋ ಎನ್ನುವಂತಾಗಿದೆ.

ಕೋವಿಡ್ ಲಾಕ್‌ಡೌನ್ ನಂತರದ ದಿನಗಳಲ್ಲಿ ಅಂದರೆ ೨೦೨೩ ರ ತರುವಾಯ ಕೇವಲ ೧೫ ತಿಂಗಳಿನಲ್ಲಿಯೇ ಕರ್ನಾಟಕದಾದ್ಯಂತ ೨೬೦ ಚಿತ್ರಮಂದಿರಗಳು ಪ್ರದರ್ಶನ ಇಲ್ಲದೆ ಬಾಗಿಲು ಮುಚ್ಚಿವೆ. ಇನ್ನೊಂದು ವರ್ಷದಲ್ಲಿ ಇನ್ನೂ ೧೦೦ ಸಿನಿಮಾ ಮಂದಿರಗಳು ಬಾಗಿಲು ಮುಚ್ಚಲಿವೆ. ಚಿತ್ರಮಂದಿರಗಳಾಗಿದ್ದ ಬೃಹತ್ ಕಟ್ಟಡಗಳು ಮದುವೆ ಛತ್ರಗಳಾಗಿವೆ. ಶಾಪಿಂಗ್ ಕಾಂಪ್ಲೆಕ್ಸ್ಗಳಾಗುತ್ತಿವೆ. ವಾಹನ ನಿಲುಗಡೆಯ ತಾಣಗಳಾಗಿ ಬದಲಾಗುತ್ತಿವೆ.

ಸಿನಿಮಾ ಪ್ರಿಯರಿಗೆ ಮನೆಯೇ ಸಿನಿಮಾ ವೀಕ್ಷಣೆಗೆ ಸೂಕ್ತ ಎನಿಸತೊಡಗಿದೆ, ಟಿವಿ ಪರದೆಯಲ್ಲಿ ಸಮಯ ಸಿಕ್ಕಾಗಲೆಲ್ಲಾ ತಮಗಿಷ್ಟ ಬಂದAತೆ ಕುಳಿತು, ಪಾನೀಯ ಸೇವಿಸುತ್ತಾ, ತಿಂಡಿ ತಿನ್ನುತ್ತಾ, ಊಟ ಮಾಡುತ್ತಾ ಹೇಗೆ ಬೇಕಾದರೂ ಹಾಗೇ ಸಿನಿಮಾ ನೋಡುವ ಹೊಸ ಶೈಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಜನರಿಗೆ ಸಂತೋಷ ನೀಡುತ್ತಿದೆ

ಓಟಿಟಿ (ಓವರ್ ದಿ ಟಾಪ್)ಗಳ ಜನಪ್ರಿಯತೆ ಹೀಗೆ ಮುಂದುವರೆದರೆ ಮಲ್ಟಿಫ್ಲೆಕ್ಸ್ಗಳು ಕೂಡ ಕೆಲವೇ ತಿಂಗಳಿನಲ್ಲಿ ಪ್ರೇಕ್ಷಕರ ಕೊರತೆ ಎದುರಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಚಂದದ ಸಿನಿಮಾ ಮಂದಿರ, ತಂಪುಹವೆ, ಒಳ್ಳೆಯ ಸಂಗೀತ, ಶಬ್ದ, ಸುಖಾಸೀನ, ಮಂದಿರದ ಆವರಣದಲ್ಲಿಯೇ ಸ್ವಾದಿಷ್ಟ ತಿಂಡಿಗಳ ಲಭ್ಯತೆ ಇವೆಲ್ಲಾ ಮಲ್ಟಿಫ್ಲೆಕ್ಸ್ಗಳ ಖ್ಯಾತಿಗೆ ಪ್ರಾರಂಭದಲ್ಲಿ ಕಾರಣವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಜನರೂ ಮಲ್ಟಿಫ್ಲೆಕ್ಸ್ಗಳಿಂದ ದೂರವಾಗಿ ಓಟಿಟಿ ವೀಕ್ಷಣೆಗೆ ಮನಸ್ಸು ತೋರುತ್ತಿದ್ದಾರೆ.

ಕೊಡಗಿನ ಕಥೆ

ಕೆಲವೇ ವರ್ಷಗಳ ಹಿಂದೆ ೧೬ ಚಿತ್ರಮಂದಿರಗಳಿದ್ದ ಕೊಡಗು ಜಿಲ್ಲೆಯಲ್ಲಿ ಈಗ ಕೇವಲ ನಾಲ್ಕು ಚಿತ್ರಪ್ರದರ್ಶನ ಮಂದಿರಗಳಿದೆ, ಕರ್ನಾಟಕದಲ್ಲಿಯೇ ಜಿಲ್ಲಾ ಕೇಂದ್ರದಲ್ಲಿ ಸಿನಿಮಾ ಮಂದಿರ ಇಲ್ಲದೇ ಇರುವ ಕೇಂದ್ರವಾಗಿ ಕೊಡಗು ಹೆಸರು ಮಾಡಿದೆ. ಮಡಿಕೇರಿಯಲ್ಲಿ ಈ ಮೊದಲು ೨ ಚಿತ್ರಮಂದಿರಗಳಿದ್ದದ್ದು ಬಸಪ್ಪ ಚಿತ್ರಮಂದಿರ ಕದಮುಚ್ಚಿ ೧೬ ವರ್ಷಗಳಾಗಿದ್ದರೆ, ೫೦ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭವೇ ಕಾವೇರಿ ಚಿತ್ರಮಂದಿರವೂ ೪ ವರ್ಷಗಳ ಹಿಂದೆ ಬಾಗಿಲು ಮುಚ್ಚಿತ್ತು, ಇದೀಗ ಕುಶಾಲನಗರ, ಸಿದ್ದಾಪುರ, ಶನಿವಾರಸಂತೆಗಳಲ್ಲಿ ಮಿನಿ ಮಲ್ಟಿಫ್ಲೆಕ್ಸ್ಗಳಿದ್ದರೆ, ಸುಂಟಿಕೊಪ್ಪದಲ್ಲಿ ಸಿನಿಮಾ ಮಂದಿರವಿದೆ.

ಈ ಸಿನಿಮಾ ಮಂದಿರಗಳ ಸ್ಥಿತಿಯೂ ಉತ್ತಮ ಎನ್ನುವಂತಿಲ್ಲ, ಚಿತ್ರಗಳ ಆಧಾರದ ಮೇಲೆ ಈ ಮಂದಿರಗಳತ್ತ ಜನ ಬರುತ್ತಿದ್ದಾರೆ, ಪ್ರಯೋಗಾತ್ಮಕ ಚಿತ್ರಗಳನ್ನು ಪ್ರದರ್ಶಿಸುವಂತೆಯೇ ಇಲ್ಲ, ಸ್ಟಾರ್ ನಟರ ಚಿತ್ರಗಳಿಗೆ ಮಾತ್ರ ಜನ ಬರುತ್ತಿದ್ದಾರೆ, ಕುಶಾಲನಗರದಲ್ಲಿ ಟಿಬೇಟಿಯನ್ ಪ್ರೇಕ್ಷಕರು ಹಿಂದಿ ಸಿನಿಮಾಗಳಿಗೆ, ಸಿದ್ದಾಪುರದಲ್ಲಿ ತಮಿಳು, ಮಲಯಾಳ ಚಿತ್ರಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಜನತೆ ತಮ್ಮೂರಿನಲ್ಲಿಯೂ ಪುಟ್ಟದಾದ ಸಿನಿಮಾ ಮಂದಿರ ಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ, ಆದರೆ ಇವರ ಆಸೆ ಈಡೇರುವುದು ಕನಸೇ ಆದಂತಿದೆ. ಗ್ರಾಮೀಣ ಪ್ರದೇಶದ ಸಿನಿಮಾ ಪ್ರದರ್ಶನಗಳಿಗೆ ಪ್ರೇಕ್ಷಕರು ಬರಲು ಭಯ ಪಡಲು ಮತ್ತೊಂದು ಕಾರಣವಾಗಿ ಕಾಡಾನೆ, ಹುಲಿ ದಾಳಿಯ ಆತಂಕವೂ ಇದೆ, ರಾತ್ರಿವೇಳೆ ಹಳ್ಳಿಯ ಪ್ರೇಕ್ಷಕರು ಮೊದಲಿನಂತೆ ಪಕ್ಕದೂರಿಗೆ ಸಿನಿಮಾ ವೀಕ್ಷಣೆಗೆ ತೆರಳಲು ಕಾಡಾನೆ ಧಾಳಿ, ಮಳೆಯ ವಾತಾವರಣ ಕೂಡ ಕಾರಣವಾಗಿದೆ.

ಹಗಲಿನಲ್ಲಿ ಕೂಲಿ ಕೆಲಸದಲ್ಲಿ ನಿರತರಾಗುವ ಕಾರ್ಮಿಕ ವರ್ಗದವರಿಗೆ ರಾತ್ರಿ ವೇಳೆ ವನ್ಯ ಪ್ರಾಣಿಗಳ ಧಾಳಿಯ ಆತಂಕವೂ ಸಿನಿಮಾ ಮಂದಿರಗಳಿAದ ದೂರವಾಗಲು ಕಾರಣ ಎನ್ನಲಾಗಿದೆ. ಹೀಗಾಗಿಯೇ ಚಿತ್ರಮಂದಿರದ ಹಾದಿಯನ್ನೇ ಜನ ಮರೆಯುವಂತಾಗಿದೆ.

ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳೂ ಯಶಸ್ಸಿನಿಂದ ದೂರವಾಗಿಯೇ ಇದೆ, ಸ್ಟಾರ್ ನಟರಾದ ಯಶ್, ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಧ್ರುವಸರ್ಜಾ ವರ್ಷಕ್ಕೊಂದು ಸಿನಿಮಾಗಳಲ್ಲಿ ನಟಿಸುತ್ತಿರುವುದು ಕೂಡ ಸಿನಿಮಾ ರಂಗದ ಹಿನ್ನೆಡೆಗೆ ಕಾರಣ ಎನ್ನಲಾಗಿದೆ, ಯಶ್, ಸುದೀಪ್ ನಟನೆಯ ಸಿನಿಮಾ ತೆರೆಕಾಣದೇ ಮೂರು ವರ್ಷಗಳೇ ಕಳೆದಿವೆ. ಹಿಂದಿ ಸಿನಿಮಾಗಳದ್ದು ಇದೇ ಕಥೆ.

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸ್ವಲ್ಪ ಹೆಸರು ಮಾಡುತ್ತಿರುವುದು ಮಲಯಾಳ ಚಿತ್ರರಂಗ, ಈ ವರ್ಷದ ೬ ತಿಂಗಳಲ್ಲಿ ಮಲಯಾಳದ ೫ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಮಲಯಾಳ ಚಿತ್ರರಂಗ ಚೇತರಿಕೆ ಹಾದಿಯಲ್ಲಿದೆ, ಈ ಚಿತ್ರಗಳೆಲ್ಲವೂ ಜನರನ್ನು ಹೆಚ್ಚಾಗಿ ತಲುಪಿದ್ದು ಓಟಿಟಿ ಮಾಧ್ಯಮದ ಮೂಲಕ ಎಂಬುದೂ ಗಮನಾರ್ಹ.

ಚಿತ್ರಮಂದಿರದಲ್ಲಿ ತೆರೆಕಂಡ ಕೇವಲ ೩೦-೪೦ ದಿನಗಳಲ್ಲಿಯೇ ಸಿನಿಮಾಗಳು ಓಟಿಟಿಯಲ್ಲಿ ತೆರೆಕಾಣುತ್ತಿರುವುದು ಕೂಡ ಪ್ರೇಕ್ಷಕರಿಗೆ ಬಹಳ ಸುಲಭವಾಗಿ ಚಿತ್ರ ವೀಕ್ಷಣೆ ಸಾಧ್ಯವಾದಂಥ ಅವಕಾಶ ಕಲ್ಪಿಸಿದೆ.

ಸಿನಿಮಾ ಮಂದಿರಕ್ಕೆ ಹೋಗುವ ಪ್ರಯಾಣ ವೆಚ್ಚ, ಟಿಕೆಟ್ ದರ, ತಿಂಡಿ, ಪಾನೀಯ ಸೇವನೆ ವೆಚ್ಚ ಇತ್ಯಾದಿಗಳು ಪ್ರೇಕ್ಷಕರ ಜೇಬಿಗೆ ದುಬಾರಿಯಾದರೆ ಮನೆಯಲ್ಲಿಯೇ ಓಟಿಟಿ ಮೂಲಕ ಕಡಿಮೆ ವೆಚ್ಚಕ್ಕೆ ಸಿನಿಮಾ ವೀಕ್ಷಣೆ ಸಾಧ್ಯವಾಗುತ್ತಿರುವ ಅಂಶವೂ ಪ್ರೇಕ್ಷಕರಿಂದ ಸಿನಿಮಾ ಮಂದಿರಗಳನ್ನು ದೂರ ಮಾಡಿದೆ.

ಸ್ಟಾರ್‌ಗಳು ಎನಿಸಿಕೊಂಡವರು ಎರಡು ವರ್ಷಕ್ಕೊಂದು ಸಿನಿಮಾದಲ್ಲಿ ನಟಿಸದೇ ವರ್ಷಕ್ಕೆರಡು ಸಿನಿಮಾ ತೆರೆಕಾಣುವಂತೆ ಮಾಡಿದರೂ ಸಿನಿಮಾ ರಂಗ ಉಸಿರಾಡಲು ಸಾಧ್ಯವಿದೆ. ಸಿನಿಮಾ ರಂಗಕ್ಕೆ ಬರುತ್ತಿರುವ ಹೊಸಬ್ಬರು ಈ ಬಣ್ಣದ ಲೋಕದ ಲೆಕ್ಕಾಚಾರ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಹೊಸಬ್ಬರ ಸಿನಿಮಾಗಳು ಹತ್ತಾರು ತೆರೆಕಾಣುತ್ತಿದ್ದರೂ, ಈ ಪೈಕಿ ಒಂದೋ ಎರಡೋ ಸಾಧಾರಣ ಯಶಸ್ಸು ಕಾಣುತ್ತಿದೆ.

ಸಿನಿಮಾ ನೋಡಿ ಮನೆಗೆ ಮರಳುವಾಗ ಮುಂದಿನ ಸಿನಿಮಾ ಯಾವುದು ಎಂದು ಕುತೂಹಲದಿಂದ ಮುಂದಿನ ಬದಲಾವಣೆಯ ಪೋಸ್ಟರ್ ನೋಡುತ್ತಿದ್ದ ಮನಸ್ಸುಗಳು ಈಗ ಪ್ರಶ್ನೆ ಮಾಡುತ್ತಿದೆ. ಪಿಕ್ಚರ್ ಮುಗಿದೇ ಹೋಯಿತಾ? ಸಿನಿಮಾ ಕಥೆ ಇಷ್ಟೇನಾ? ಇನ್ನು ಮಂದಿರದಲ್ಲಿ ಸಿನಿಮಾ ನೋಡುವ ದಿನಗಳು ಇಲ್ಲವಾ? ಪಿಕ್ಚರ್ ಮುಗಿತಾ?

- ಅನಿಲ್ ಎಚ್.ಟಿ., ಮಡಿಕೇರಿ