ಮಡಿಕೇರಿ, ಜು. ೬: ಮಕ್ಕಳು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದತ್ತಲೂ ಒಲವು ತೋರಬೇಕೆಂದು ಗಣ್ಯರು ಕರೆ ನೀಡಿದರು.

ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾಹಿತಿ ದಿ. ಜಿ.ಟಿ.ನಾರಾಯಣ ರಾವ್ ಅವರ ಬದುಕು ಬರಹ ಕುರಿತ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ವಿದ್ಯಾರ್ಥಿಗಳು ಪ್ರಶ್ನಿಸುವ, ಉತ್ತರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸ್ವಾತಂತ್ರö್ಯವಿದೆ, ಅದನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.

ಪ್ರಪಂಚದಲ್ಲಿ ಲೋಕದೊಳಗಡೆ ಮತ್ತಷ್ಟು ಲೋಕಗಳಿವೆ. ಕ್ರೀಡೆ, ಸಾಹಿತ್ಯ, ಸಂಗೀತ, ಪಾಪಿಗಳ ಲೋಕ ಕೂಡ ಇದೆ. ಅದರಲ್ಲಿ ಅಧ್ಯಾತ್ಮಿಕ ಲೋಕ ಚೆನ್ನಾಗಿದೆ. ಧ್ಯಾನದಿಂದ ಸ್ಥಿರತೆ, ಅನಂತತೆಯನ್ನು ಸಾಧಿಸಬಹುದಾಗಿದೆ. ಸಾಹಿತ್ಯ ಲೋಕ ಅತಿ ಮುಖ್ಯ ವಾದುದಾಗಿದೆ. ಸಾಹಿತಿ ಸಾಮಾನ್ಯನಾಗಿ ಕಂಡರೂ ಆತನಲ್ಲಿ ಎಲ್ಲ ರೀತಿಯ ಸ್ವಭಾವಗಳು ಅಡಕವಾಗಿರುತ್ತದೆ. ಬರಹದಲ್ಲಿ ಕಲಾತ್ಮಕತೆ, ಸೃಜಶೀಲತೆ ಇರುತ್ತದೆ. ಎಲ್ಲವೂ ಇರದಿದ್ದಲ್ಲಿ ಆತನ ಬರಹದಲ್ಲಿ ಭಾವನೆಗಳು ಇರುವುದಿಲ್ಲ, ಸುಪ್ತ ಮನಸು ಇದ್ದಲ್ಲಿ ಎಲ್ಲವೂ ಇರುತ್ತದೆ. ನಿಮ್ಮಲ್ಲಿಯೂ ಸುಪ್ತ ಮನಸು ಇದೆ, ನೀವೂ ಕೂಡ ಸಾಹಿತಿಗಳಾಗಬಹುದು. ನಿರಂತರ ಕಲಿಕೆ, ಪ್ರಯತ್ನದಿಂದ ಎಲ್ಲವೂ ಸಾಧ್ಯವಾಗುತ್ತದೆ. ಕಣ್ಣು, ಕಿವಿ ತೆರೆದಿರಬೇಕು, ಆಗ ಸುಪ್ತ ಮನಸು ಜಾಗೃತಗೊಳ್ಳುತ್ತದೆ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್, ನಾರಾಯಣ ರಾವ್ ಜಿ.ಟಿ.ಎನ್. ಎಂದೇ ಪ್ರಸಿದ್ಧರಾಗಿದ್ದರು. ಬೋಧಕರಾಗಿ ಹಲವಾರು ವಿದ್ಯಾರ್ಥಿ, ಸಾಹಿತಿಗಳ ಬಳಗವನ್ನು ಹೊಂದಿದ್ದರು. ಅನೇಕ ಪುಸ್ತಕಗಳನ್ನು ಬರೆದಿರುವ ಅವರದ್ದು ಗಣಿತ ಹಾಗೂ ವಿಜ್ಞಾನ ಆಸಕ್ತಿಯ ಕ್ಷೇತ್ರ, ವಿಜ್ಞಾನದ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇಂತಹ ಸಾಧಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು. ಏನಾದರೂ ಸಾಧನೆ ಮಾಡಿದರೆ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಬಹುದು. ಈಗಿನಿಂದಲೇ ಸಣ್ಣ ಪುಟ್ಟ ಕವನಗಳನ್ನು ಬರೆಯುತ್ತಾ ಮುಂದೊAದು ಪುಸ್ತಕವಾಗಿ ಪ್ರಕಟ ಮಾಡಬಹುದು. ಸಾಹಿತ್ಯದತ್ತಲೂ ಒಲವು ತೋರಬೇಕೆಂದು ಹೇಳಿದರು. ಕನ್ನಡ ಸಿರಿ ಸ್ನೇಹ ಬಳಗ ಸಾಹಿತ್ಯ ಪರಿಷತ್ತು ಮಾಡುವ ಚಟುವಟಿಕೆ ಗಳಿಗಿಂತಲೂ ಹೆಚ್ಚಿನ ಕಾರ್ಯಕ್ರಮ ಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಾರಾಯಣ ರಾವ್ ಅವರ ಬದುಕು ಬರಹದ ಬಗ್ಗೆ ಉಪನ್ಯಾಸ ನೀಡಿದ ಜಯಲಕ್ಷಿö್ಮ ಶೇಖರ್ ಅವರು ತಮ್ಮ ಮಾತಿನಲ್ಲಿ, ನಾರಾಯಣ ರಾವ್ ಅವರು ಅನೇಕ ಕೃತಿಗಳನ್ನು ರಚನೆ ಮಾಡಿದ್ದು, ಹಲವಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಅವರ ಬದುಕು ಹಾಗೂ ಕೃತಿಗಳನ್ನು ಗಮನಿಸಿದರೆ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ನೊಬೆಲ್ ಪ್ರಶಸ್ತಿ ವಿಜೇತರನ್ನು ಸಂದರ್ಶನ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಒಳಗಾದವರು ನಾರಾಯಣ ರಾವ್ ಎಂದು ಹೇಳಿದರು. ಇತರರಿಗೆ ಸಹಾಯ ಮಾಡುವ, ಸಮಾಜಕ್ಕಾಗಿ ಅರ್ಪಣೆ ಮಾಡುವ ಮನೋಭಾವ ಹೊಂದಿದ್ದ ರಾಯರು ಇಂದಿಗೂ ಎಂದೆAದಿಗೂ ಆದರ್ಶಪ್ರಾಯರು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿದ್ದ ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿ ಗಳು ಓದಿನೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿ ಕೊಳ್ಳಬೇಕು. ಕ್ರೀಡೆ, ಕಲೆ, ಸಂಗೀತ ಹೀಗೆ ಹಲವಾರು ಕ್ಷೇತ್ರಗಳಿದ್ದು, ಯಾವುದರಲ್ಲಾದರೂ ತೊಡಗಿಸಿ ಕೊಂಡರೆ ಬುದ್ಧಿಶಕ್ತಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದಲ್ಲಿ ತೊಡಗಿಸಿಕೊಂಡರೆ ಜ್ಞಾನಾರ್ಜನೆಯೊಂದಿಗೆ ವಿಷಯದ ಗ್ರಹಿಕೆಯಾಗುತ್ತದೆ. ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ, ಸರಕಾರಿ ಶಾಲೆಯ ಬೋಧಕರು ತಿಳಿದವರು, ಜ್ಞಾನವುಳ್ಳವರು ಆಗಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಹೇಳಿದರು.

ಅತಿಥಿಯಾಗಿದ್ದ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಕೊಡಗಿನಲ್ಲಿ ಸಾಹಿತ್ಯದ ಅಭಿರುಚಿಯಿಲ್ಲ ಎಂಬ ಮಾತು ಇತ್ತು, ಆದರೆ ಅದು ಸುಳ್ಳು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ತಿಂಗಳಿಗೆ ಎರಡು, ಮೂರು ಕೃತಿಗಳು ರಚನೆಯಾಗುತ್ತಿರುವುದೇ ಸಾಕ್ಷಿ. ಸಾಹಿತ್ಯ ರಚನೆ ಕಬ್ಬಿಣದ ಕಡಲೆ ಏನಲ್ಲ, ಏಕಾಗ್ರತೆ ಹಾಗೂ ಮನಸು ಇದ್ದರೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕರ್ನಾಟಕದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಾಧನೆ ಮಾಡಿದ, ಶ್ರಮಿಸಿದವರಿಗೆ ಗೌರವ ನೀಡುವದು, ಅವರನ್ನು ನೆನಪಿಸಿಕೊಳ್ಳುವುದರೊಂದಿಗೆ ಅವರುಗಳ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಳಗದ ಮೂಲಕ ಒಂದು ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದ್ದು, ಇದು ಹತ್ತೊಂಬತ್ತನೇ ಕಾರ್ಯಕ್ರಮವಾಗಿದೆ. ಜಿಲ್ಲೆಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು.

ಎಲ್ಲರೂ ಸಹಕಾರ ನಿಡಬೇಕೆಂದು ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಮಾತನಾಡಿ, ಇಂತಹ ಕಾರ್ಯಕ್ರಮ ಗಳನ್ನು ಕಾಲೇಜಿನಲ್ಲಿ ನಡೆಸುವುದರಿಂದ ಮಹನೀಯರ ಪರಿಚಯ ವಾಗುವುದರೊಂದಿಗೆ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡುತ್ತದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪರಿಚಯವೂ ಆಗುತ್ತದೆ. ಇದೊಂದು ಸೌಭಾಗ್ಯವೆಂದು ಹೇಳಿದರು. ಮಕ್ಕಳಲ್ಲಿ ಓದುವ ಹವ್ಯಾಸ ಇರಬೇಕು. ಶಕ್ತಿ ಪತ್ರಿಕೆ ಓದಿದರೆ ಬಹಳಷ್ಟು ಮಾಹಿತಿ ಸಿಗುತ್ತದೆ. ಕೊಡಗಿನ ಸಾಹಿತಿಗಳ ಪರಿಚಯ ವಾಗುತ್ತದೆ. ಕೊಡಗಿನಲ್ಲಿ ಪ್ರವಾಸಿ ತಾಣಗಳು, ಬಾರ್, ಪಾರ್ಲರ್‌ಗಳು ಮಾತ್ರವಲ್ಲ, ಸಾಹಿತಿಗಳೂ ಇದ್ದಾರೆ. ಈ ಬಗ್ಗೆ ತಿಳಿದುಕೊಳ್ಳಬೇಕು. ಯಾವ ಸಿದ್ಧಾಂತವೂ ಜೀವನಕ್ಕೆ ಸಹಕಾರಿ ಯಾಗುವದಿಲ್ಲ, ಶ್ರಮವೇ ಸಿದ್ಧಾಂತ ವಾಗಬೇಕು. ಮನಸಿನಲ್ಲಿ ಚಿಂತನೆಗಳು ಮೂಡಬೇಕು. ಮಹನೀಯರ ಪುಸ್ತಕಗಳನ್ನು ಓದಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಕಿಗ್ಗಾಲು ಗಿರೀಶ್ ಅವರು ಬರೆದ ‘ಕಳೆದು ಕೊಂಡವನು ಮತ್ತು ಇತರ ಕತೆಗಳು’ ಕೃತಿಯನ್ನು ಬಿ.ಜಿ.ಅನಂತಶಯನ ಅವರು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ವಿಜಯ ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಉಪನ್ಯಾಸಕ ಚಿದಾನಂದ ಸ್ವಾಗತಿಸಿದರು. ಉಪನ್ಯಾಸಕಿ ಪೂರ್ಣಿಮಾ ನಿರೂಪಿಸಿದರೆ, ಕವಿ ಪಿ.ಎಸ್.ವೈಲೇಶ್ ವಂದಿಸಿದರು.