ಮಡಿಕೇರಿ, ಜು. ೬: ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಇದೀಗ ತಾಯಿಯಾಗುತ್ತಿದ್ದಾರೆ. ನಟ ಉಳ್ಳಿಯಡ ಭುವನ್ ಪೊನ್ನಣ್ಣ ಅವರನ್ನು ವಿವಾಹವಾಗಿರುವ ಹರ್ಷಿಕಾ ಇದೀಗ ಗರ್ಭಿಣಿ ಎಂಬ ವಿಚಾರ ಮಾಧ್ಯಮಗಳಲ್ಲಿ ಭಾರೀ ಸುದ್ದಿಯೂ ಆಗಿದೆ. ಚಿತ್ರನಟ-ನಟಿಯಾಗಿರುವದರಿಂದ ಇದು ಸಹಜವೂ ಆಗಿದೆ.ಆದರೆ ಈ ವಿಚಾರ ಸಂತಸದ ಸುದ್ದಿಯಾಗುವದರೊಂದಿಗೆ ಇವರುಗಳು ಈಗಿನ ಸಮಾಜಕ್ಕೆ ಹೊಸತೊಂದು ಸಂದೇಶವನ್ನೂ ಈ ಮೂಲಕ ನೀಡಿರುವುದು ವಿಶೇಷವಾಗಿದೆ. ಈ ಹಿಂದಿನ ಕಾಲದಲ್ಲಿ ಕೊಡವ ಪರಂಪರೆಯAತೆ ತಾಯಿಯಾಗುವ ಒಬ್ಬ ಮಹಿಳೆಯನ್ನು ಯಾವ ರೀತಿ ಆಧರಿಸಿ ಉಪಚರಿಸಲಾಗುತ್ತಿತ್ತು. ಕೊಡವ ಐನ್‌ಮನೆಗಳು ಅಲ್ಲಿನ ಚಿತ್ರಣ, ವಾತಾವರಣ ಹೇಗಿರುತ್ತಿತ್ತು. ಹೊಸತೊಂದು ಜೀವನ ಆಗಮನದ ಸಂತಸದ ಕ್ಷಣವನ್ನು ಯಾವ ರೀತಿಯಾಗಿ ಸಂಭ್ರಮಿಸಲಾಗುತ್ತಿತ್ತು ಎಂಬತ್ಯಾದಿ ಸಂದೇಶಗಳನ್ನು ಸಾರುವಂತಹ ವಿಚಾರಗಳನ್ನು ಪ್ರತಿಬಿಂಬಿಸುವAತಹ ಫೋಟೋಶೂಟ್, ವೀಡಿಯೋದ ಮೂಲಕ ಗತಕಾಲದ ಸಂತಸದ ಸಂದೇಶವೊAದನ್ನು ಈ ಕುಟುಂಬ ಸಮಾಜದ ಮುಂದಿಟ್ಟಿದೆ. ಈಗಿನ ‘ಬೇಬಿಬಂಪ್’ ನಂತಹ ಆಧುನೀಕತೆಯ, ಕಮರ್ಷಿಯಲ್ ಮಾದರಿಯ ಪರಿಕಲ್ಪನೆಯನ್ನೇ ಆಧರಿಸಿ ಇದನ್ನೇ ಹಿಂದಿನ ವೈಭವವನ್ನು ಸಾರುವ ರೀತಿಯಲ್ಲಿ ಆಧುನಿಕ ಪ್ರಪಂಚದ ಮುಂದಿಟ್ಟಿರುವುದು ವಿಶೇಷ ಗಮನ ಸೆಳೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುವದರೊಂದಿಗೆ ಎಲ್ಲರ ಹುಬ್ಬೇರಿಸಿದೆ.
ಗರ್ಭಿಣಿ ಪತ್ನಿಯನ್ನು ನೋಡಲು ಆಗಮಿಸುವ ಪತಿಗೆ ಸ್ವಾಗತ ಕೋರುವ ತಂದೆ. ಮಳೆಯ ನಡುವೆ ಸಾಂಬ್ರಾಣಿಯ ಹೊಗೆಯೊಂದಿಗೆ ಮಹಿಳೆಯೊಬ್ಬರ ಸ್ವಾಗತ, ಹಳೆಯ ಕಾಲದಲ್ಲಿ ಐನ್‌ಮನೆ ಹೊಂದಿರುತ್ತಿದ್ದ ಕೊಠಡಿಯ ಚಿತ್ರಣ, ಪ್ರೀತಿ-ಸಾಮರಸ್ಯದ ಸಹಬಾಳ್ವೆ ಹುತ್ತರಿಗೆ ಕಟ್ಟಿರುತ್ತಿದ್ದ ಭತ್ತದ ಕದಿರು, ಲ್ಯಾಂಟೀನ್ ದೀಪದ ಬೆಳಕು, ಉದ್ದತೋಳಿನ ರವಕೆ, ವಸ್ತçದೊಂದಿಗೆ ಇರುವ ತುಂಬು ಗರ್ಭಿಣಿ, ಉಪಚರಿಸುವ ಮಹಿಳೆಯರು, ಇವರ ನಡುವೆ ಕೋವಿ ಹಿಡಿದು ಬರುವ ಪತಿ, ಬಳಿಕ ಎಲ್ಲರೂ ಒಟ್ಟಾಗಿ ಸೇರಿ ತೆಗೆಯುವ ಭಾವಚಿತ್ರ. ಇಂತಹ ಸನ್ನಿವೇಶ ಭಾವನಾಲೋಕಕ್ಕೆ ಕೊಂಡೊಯ್ಯುತ್ತವೆ. ಈ ಕಾರಣದಿಂದಲೇ ಈ ಪರಿಕಲ್ಪನೆಯ ‘ಬೇಬಿ ಬಂಪ್’ ಎಲ್ಲರ ಗಮನ ಸೆಳೆಯುವದರೊಂದಿಗೆ ಚರ್ಚೆಗೂ ಗ್ರಾಸವಾಗಿರುವುದು ಭುವನ್-ಹರ್ಷಿಕಾ ತಂದೆ-ತಾಯಿಯಾಗುತ್ತಿರುವ ವಿಚಾರಕ್ಕೆ ಹೆಚ್ಚಿನ ಒತ್ತು ತಂದು ಕೊಟ್ಟಿದೆ ಎಂಬದು ಇದನ್ನು ‘ಲೈಕ್’ ಮಾಡಿರುವವರ ಅಭಿಪ್ರಾಯವಾಗಿದೆ.
-ಶಶಿ