ಗೋಣಿಕೊಪ್ಪಲು, ಜು. ೬: ಮಾಜಿ ಸಂಸದ ಹಾಲಿ, ವಿಧಾನ ಪರಿಷತ್ತಿನ ಸದಸ್ಯರಾಗಿರುವ ಮಾಜಿ ಸಚಿವ ಅಡಗೂರು ಹೆಚ್. ವಿಶ್ವನಾಥ್ ಅವರು ಬರೆದಿರುವ ‘ಪಾರ್ಲಿಮೆಂಟ್ ಪ್ರದಕ್ಷಿಣೆ’ ಎಂಬ ಕೃತಿ ಲಂಡನ್ ನಗರದ ಥೇಮ್ಸ್ ನದಿ ಬಳಿ ಇರುವ ಬಸವೇಶ್ವರ ಪುತ್ಥಳಿ ಮುಂಭಾಗದಲ್ಲಿ ತಾ. ೨೦ರಂದು ಬಿಡುಗಡೆಯಾಗಲಿದೆ.

ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿಗಳ ಸಾನಿಧ್ಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಂದ ಹಾಗೂ ಅತಿಥಿ ಗಣ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಹೊರದೇಶದಲ್ಲಿ ಕನ್ನಡದ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ೧೦೦ ಪುಟಗಳ ಈ ಕೃತಿಯಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆಯ ಬಗ್ಗೆ ವಿವರಿಸಲಾಗಿದೆ. ಆತ್ಮೀಯ ಬಸವೇಶ್ವರ ಬಳಗವು ಲಂಡನ್‌ಗೆ ನನ್ನನ್ನು ಬರಮಾಡಿಕೊಳ್ಳುತ್ತಿದ್ದು ಅಲ್ಲಿನ ಪ್ರತಿಷ್ಠಿತ ಬಸವೇಶ್ವರ ಪುತ್ಥಳಿಯ ಮುಂದೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಹಿತೈಷಿಗಳು ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ, ಪುಸ್ತಕ ಬಿಡುಗಡೆಗೆ ಶುಭ ಕೋರಿದ್ದಾರೆ. ಸ್ವಾಮೀಜಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ ಎಂದರು.

(ಮೊದಲ ಪುಟದಿಂದ) ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಆರ್ಶೀವಚನ ನೀಡುವ ಮೂಲಕ ಕನ್ನಡ ಭಾಷೆಗೆ ಒತ್ತು ನೀಡುವ ಮೂಲಕ ವಿಶ್ವನಾಥ್ ಅವರು ಹೊರದೇಶದಲ್ಲಿ ತಮ್ಮ ಕೃತಿಯನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಹೀಗಾಗಿ ಕೊಡಗಿನಿಂದ ಇವರನ್ನು ಆತ್ಮೀಯವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೀಳ್ಕೊಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಮಾತನಾಡಿ ಇಡೀ ಬ್ರಹ್ಮಾಂಡ ಮೂರು ವಿಚಾರಗಳಾದ ಸೃಷ್ಟಿ, ಸ್ಥಿತಿ, ಲಯ ಇದರ ಮೇಲೆ ನಿಂತಿದೆ. ಸೃಷ್ಟಿ ಆಗಿದೆ,ನಾವು ನೋಡಬಹುದಾಗಿದೆ. ಇದರಲ್ಲಿ ನಾವುಗಳು ಸ್ಥಿತರಾಗಿದ್ದೇವೆ. ಆದರೆ ಅದೇ ಸತ್ಯ ಅಂದುಕೊಳ್ಳುವ ಮೂಲಕ ಭ್ರಮೆಯಲ್ಲಿ ನಾವುಗಳು ಸಾಗುತ್ತಿದ್ದೇವೆ. ಈ ಕ್ರಿಯೆಗಳು ಸಂಪೂರ್ಣವಾಗಬೇಕಾದಲ್ಲಿ ಅದು ಲಯವಾಗಬೇಕು ಎಂದು ಹೇಳುತ್ತಾರೆ. ಎಲ್ಲವೂ ವಿಕಾಸವಾಗಲೇಬೇಕು. ಹೆಚ್. ವಿಶ್ವನಾಥ್ ಬರೆದ ಕೃತಿಗಳು ಇಂದು ಹೊರ ದೇಶದಲ್ಲಿ ಬಿಡುಗಡೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ಕೃತಿ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ವೀರಾಜಪೇಟೆಯ ಸರ್ವೋದಯ ವಿದ್ಯಾಸಂಸ್ಥೆಯ ಪ್ರಾಂಶುಪಾಲೆÀ

ಡಾ. ವಾಣಿ ಮಾತನಾಡಿ ಅಪರೂಪದ ರಾಜಕಾರಣಿಯಾಗಿ ಕಂಡಿದ್ದನ್ನು ನೇರವಾಗಿ ಹೇಳುವ ಹೆಚ್. ವಿಶ್ವನಾಥ್ ಅವರು ಅನೇಕ ಪುಸ್ತಕಗಳನ್ನು ಹೊರ ತಂದಿದ್ದಾರೆ. ಇದೀಗ ಕನ್ನಡದ ಕೃತಿಯನ್ನು ಹೊರ ದೇಶದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ನಮ್ಮ ದೇಶದ ಗೌರವ ಹೆಚ್ಚಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕರಾದ ಸಂಕೇತ್ ಪೂವಯ್ಯ ಮಾತನಾಡಿ ನೇರಾ ನಡೆ ನುಡಿಯ ಹೆಚ್.ವಿಶ್ವನಾಥ್‌ರವರು ಅತ್ಯಂತ ಪ್ರಬುದ್ದ ರಾಜಕಾರಣಿಯಾಗಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿ ಅಧಿಕವಾಗಬೇಕು. ವಿಶ್ವನಾಥ್ ಬರೆದಿರುವ ಪುಸ್ತಕಗಳು ಹಲವಾರು ವಿಚಾರಧಾರೆಗಳನ್ನು ಹೊಂದಿದೆ. ವೇದಿಕೆಯಲ್ಲಿ ಮಾತನಾಡಿದರಷ್ಟೆ ಸಾಲದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರಷ್ಟೆ ಅರ್ಥ ಬರುತ್ತದೆ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ನಾವು ಇಷ್ಟಪಟ್ಟು ಮಾಡಬೇಕು. ಪ್ರೀತಿ ಮಾಡುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜಾತಿ ಮತ್ತು ಧರ್ಮದ ಬಂಧನದಿAದ ಈ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕಾದರೆ ಯುವಕ ಯುವತಿಯರಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ಹಲವು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೆ ಎಂ ಗಣೇಶ್ ಸ್ವಾಗತಿಸಿ, ವಕೀಲರಾದ ನರೇಂದ್ರ ಕಾಮತ್ ನಿರೂಪಿಸಿ, ಕಾಳಮಂಡ ಜಗತ್ ವಂದಿಸಿದರು. ನೆರವಂಡ ಉಮೇಶ್, ಮಾಜಿ ಡಿಸಿಸಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲುವಿನ ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಮುಂತಾದವರು ಭಾಗವಹಿಸಿದ್ದರು.

-ಹೆಚ್.ಕೆ.ಜಗದೀಶ್