ಐಗೂರು, ಜು. ೭: ಈ ಬಾರಿ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಪ್ರಾರಂಭವಾಗದಿದ್ದರೂ ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದ ಐಗೂರು ವ್ಯಾಪ್ತಿಯಲ್ಲಿ ಸುಮಾರು ೨೦ ಸೆಂಟಿನಷ್ಟು ಮಳೆಯಾಗಿದ್ದು, ಗದ್ದೆ ಉಳುಮೆ ಪ್ರಾರಂಭವಾಗಿದೆ.

ಕಾಜೂರು ಭಾಗದ ಹಿರಿಯ ಇಂಟಾನ್ ಭತ್ತದ ಬೆಳೆಯಲ್ಲಿ ಪ್ರಶಸ್ತಿ ಪಡೆದ ಕೃಷಿಕ ದಿವಂಗತರಾದ ಕಾಳೇರಮ್ಮನ ಉತ್ತಯ್ಯರವರ ಪುತ್ರನಾದ, ಕೃಷಿಕ ಕಾಳೇರಮ್ಮನ ಸೋಮೇಶ್ ತಮ್ಮ ಗದ್ದೆಯಲ್ಲಿ ಟಿಲ್ಲರ್ ಮುಖಾಂತರ ಉಳುಮೆ ಕೆಲಸ ಪ್ರಾರಂಭ ಮಾಡಿದ್ದಾರೆ. ಈ ಭಾಗದಲ್ಲಿ ಬಹಳ ವರ್ಷದ ಹಿಂದಿನಿAದಲೂ ಎಲ್ಲಾ ರೈತರು ಗದ್ದೆಗಳಲ್ಲಿ ಉಳುಮೆ ಮಾಡಿ ಬೀಜಗಳನ್ನು ಬಿತ್ತಿ ಕ್ವಿಂಟಾಲ್‌ಗಟ್ಟಲೆ ಭತ್ತವನ್ನು ಬೆಳೆಯುತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಗದ್ದೆಗಳು ಮಾಯವಾಗಿ ಕೆಲವು ಗದ್ದೆಗಳು ಮಾತ್ರ ಉಳಿದಿವೆ ಎಂದು ಸೋಮೇಶ್ ಹೇಳುತ್ತಾರೆ. ಹುತ್ತರಿ ಹಬ್ಬದಂದು ಮುಖ್ಯವಾಗಿ ಬೇಕಾದ ಭತ್ತದ ಕದಿರಿಗಾಗಿ ತಾಲೂಕಿನಾದ್ಯಂತ ಹುಡುಕಿಕೊಂಡು ಹೋಗಿ ಬೇರೆಯವರ ಜೊತೆ ಕದಿರನ್ನು ಬೇಡುವ ಸ್ಥಿತಿ ಉಂಟಾಗಿದೆ. ರೈತರು ಗದ್ದೆಗಳಲ್ಲಿ ಕೃಷಿ ಚಟುವಟಿಕೆಯ ಸಮಯದಲ್ಲಿ ಮಳೆಗಾಳಿಯಲ್ಲಿ ಕೆಲಸ ಮಾಡಿ ಸುಸ್ತಾದ ನಂತರ ನೇಗಿಲುಗಳನ್ನು ಪೂಜೆ ಮಾಡಿ ಆಚರಿಸುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಕೈಲ್ ಮುಹೂರ್ತ ಹಬ್ಬವು ಒಂದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರ ಮನೆಗಳಲ್ಲಿ ಭೂಮಿಯನ್ನು ಉಳುಮೆ ಮಾಡುವ ನೇಗಿಲುಗಳೇ ಮಾಯವಾಗಿದೆ. ಎತ್ತುಗಳು ನೇಗಿಲ ಜೊತೆ ಉಳುಮೆ ಮಾಡುವಾಗ ಎತ್ತುಗಳು ತುಳಿದ ಭೂಮಿಯಲ್ಲಿ ಬೆಳೆದ ಫಲಪ್ರದದಾಯಕವಾದ ಬೆಳೆಯು ಆರೋಗ್ಯಕ್ಕೆ ಶಕ್ತಿಯನ್ನು ನೀಡುತ್ತದೆ ಎಂಬುದು ಇವರ ಅಭಿಪ್ರಾಯ.

- ಸುಕುಮಾರ