ಕಣಿವೆ, ಜು. ೭: ಫ.ಗು. ಹಳಕಟ್ಟಿ ಇಲ್ಲದಿದ್ದರೆ ಬಸವಾದಿ ಶರಣರು ತಾಳೆಗರಿ ಯಲ್ಲಿ ರಚಿಸಿದ ವಚನಗಳು ಕಣ್ಮರೆಯಾಗುತ್ತಿದ್ದವು ಎಂದು ಸಾಹಿತಿ ಮೆ.ನಾ. ವೆಂಕಟನಾಯಕ್ ಹೇಳಿದರು.

ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೆಬ್ಬಾಲೆಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಸಂರಕ್ಷಕ ಫ.ಗು. ಹಳಕಟ್ಟಿ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾವಿರ ವರ್ಷಗಳ ಹಿಂದೆ ಸಮಾಜದಲ್ಲಿ ಬೇರೂರಿದ್ದಂತಹ ಅಜ್ಞಾನ, ಅಂಧಕಾರ ಹಾಗೂ ಮೌಢ್ಯಗಳ ವಿರುದ್ಧ ಸಮರ ಸಾರಿದ ವಚನಕಾರರು ತಾಳೆಗರಿಯಲ್ಲಿ ಬರೆದಿಟ್ಟಂತಹ ಶಾಸನಗಳೆಂಬ ವಚನಗಳ ಬಗ್ಗೆ ಸಂಶೋಧನೆ ನಡೆಸಿ ಅಡಗಿದ್ದ ವಚನಗಳನ್ನು ಹುಡುಕಿ ಅವುಗಳಿಗೆ ಜೀವ ನೀಡಿದ ಹಳಕಟ್ಟಿ ಅವರು ನವ ಸಮಾಜದ ನಿರ್ಮಾಣದ ಹರಿಕಾರರು ಎಂದು ವೆಂಕಟನಾಯಕ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕುಮಾರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಒಳ ಗೊಂಡAತೆ ಯುವಪೀಳಿಗೆಗೆ ವಚನಕಾರರ ಬದುಕು ಆದರ್ಶವಾಗಬೇಕಿದೆ.

ಆ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಫ.ಗು. ಹಳಕಟ್ಟಿಯವರ ಬದುಕು ಬರಹವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ವಾಗುತ್ತಿದೆ ಎಂದರು.

ಕಾರ್ಯಕ್ರಮದ ಮೇಲ್ವಿಚಾರಕ ಮಣಜೂರು ಮಂಜುನಾಥ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಲ್. ರಮೇಶ್, ಪಿಯು ಕಾಲೇಜು ಪ್ರಾಂಶುಪಾಲ ಎಂ.ಕೆ. ವಿಜಯಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಉಪನ್ಯಾಸಕರಾದ ಭೋಜೇಗೌಡ, ಗೌತಮಿ, ಅಭಿಲಾಷ್, ಮಂಜುನಾಥ ಇದ್ದರು. ಶಿಕ್ಷಕ ಲೋಕೇಶ್ ನಿರೂಪಿಸಿ, ಉಪನ್ಯಾಸಕಿ ಕವಿತಾ ಸ್ವಾಗತಿಸಿ, ಎ.ಕೆ. ಅನಂತ ವಂದಿಸಿದರು.